ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಚಿವ ಜಯಚಂದ್ರ ವಿರುದ್ಧ ಕೋಡಿಹಳ್ಳಿ ಆಕ್ರೋಶ

Mainashree
Updated On : 22 Feb 2014, 11:54 am

ಶಿರಾ: ಪ್ರಸಕ್ತ ತಿಂಗಳಲ್ಲಿಯೇ ಶಿರಾ ತಾಲೂಕಿನ ರೈತರು ತಮ್ಮ ಪ್ರಬಲ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಹಸೀಲ್ದಾರ್ ಕಚೇರಿ ಎದುರು ನಿರಂತರವಾಗಿ ಪ್ರತಿಭಟನೆ ಕೈಗೊಂಡಿದ್ದರೂ ಅವರ ಸಮಸ್ಯೆಗಳಿಗೆ ಸ್ಥಳೀಯ ಶಾಸಕರು ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ. ಈ ಭಾಗದ ರೈತರೇ ಅವರಿಗೆ ಮುಂದೆ ತಕ್ಕ ಪಾಠ ಕಲಿಸುತ್ತಾರೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಅವರು ನಗರದ ತಹಸೀಲ್ದಾರ್ ಕಚೇರಿ ಮುಂದೆ ತಾಲೂಕಿನ ಹಲ್ಕೂರು ಬಳಿ ನಿರ್ಮಿಸಿರುವ ಕೋಳಿಫಾರಂನಿಂದ ನೊಣಗಳ ಕಾಟ ಹೆಚ್ಚಾಗಿ ಸಾರ್ವಜನಿಕರು ಹಾಗೂ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕಳೆದ 5 ದಿನಗಳಿಂದಲೂ ನಡೆಸುತ್ತಿರುವ ನಿರಂತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು. ಪ್ರತಿಭಟನಾ ನಿರತ ರೈತರ ಸಮಸ್ಯೆಗಳನ್ನು ಆಲಿಸಿದ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೋಳಿ ಫಾರಂ ಮುಚ್ಚಿಸುವಂತೆ ನಡೆಸುತ್ತಿರುವ ಹೋರಾಟದ ಸ್ಥಳಕ್ಕೂ ಭೇಟಿ ನೀಡದೆ ಶಿರಾ ಭಾಗದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆಪಾದಿಸಿದ ಅವರು,  ಮುಂದಿನ ಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ಅವರಿಗೆ ತಕ್ಕ ಪಾಠ ಕಲಿಸುವುದು ಖಚಿತ ಎಂದು ತಿಳಿಸಿದರು.
ಹಲ್ಕೂರು ಕೋಳಿ ಫಾರಂ ಸಮಸ್ಯೆ ಕುರಿತಂತೆ ಜಿಲ್ಲಾಡಳಿತವು ಫೆ. 24 ರವರೆಗೆ ಗಡವು ನೀಡಿದೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು ಅಲ್ಲಿವರೆಗೂ ಕೂಡ ರೈತರು ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಿದ್ದು, ಜಿಲ್ಲಾಡಳಿತ ಕೂಡಲೇ ರೈತರ ಈ ಸಮಸ್ಯೆಗೆ ಸ್ಪಂದಿಸಲೇಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement