ಹೇಮಾವತಿ ಯೋಜನೆಗೆ ಶೀಘ್ರದಲ್ಲೇ ಗುದ್ದಲಿಪೂಜೆ: ಮಂಜು
ಮಾಗಡಿ: ಕಳೆದ 20 ವರ್ಷಗಳ ಜನತೆಯ ಹೇಮಾವತಿ ನೀರಿನ ಯೋಜನೆಯ ಕನಸು ಈಡೇರುವ ಸಂದರ್ಭ ಒದಗಿ ಬಂದ ಹಿನ್ನೆಲೆಯಲ್ಲಿ ಕೆಪಿಸಿಸಿ ಸದಸ್ಯ ಎ.ಮಂಜು ನೇತೃತ್ವದಲ್ಲಿ ಇಲ್ಲಿನ ಕಲ್ಯಾಗೇಟ್ ಸಾರ್ವಜನಿಕ ಶ್ರೀವರಸಿದ್ದಿವಿನಾಯಕಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎ.ಮಂಜು ಮಾಗಡಿಗೆ ಹೇಮಾವತಿ ನೀರಿನ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 277.50 ಕೋಟಿ ರು. ವೆಚ್ಚದ ಯೋಜನೆ ಕಾಮಗಾರಿಗೆ ಒಪ್ಪಿಗೆ ನೀಡಿದ್ದು, ಅತಿ ಶೀಘ್ರದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಬಹುದಿನಗಳ ಜನರ
ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಕನಸಿನ ಕೂಸು ಹೇಮಾವತಿ. ಹೇಮಾವತಿ ನೀರಾವರಿ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಉಸ್ತವಾರಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಕ್ಷೇತ್ರದ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಿರಿಯಣ್ಣ,ಪುರಸಭಾ ಸದಸ್ಯರಾದ ಮಂಜುನಾಥ್, ಕೆ.ವಿ. ಬಾಲು, ಶಿವಕುಮಾರ್, ಮಹೇಶ್, ಮಹದೇವ್, ನಿರ್ಮಲಾ ಸೀತಾರಾಂ, ಸುಶೀಲಮ್ಮ ರಂಗಹನುಮಯ್ಯ, ಮಾಜಿ ಅಧ್ಯಕ್ಷರಾದ ಪಿ.ವಿ.ಸೀತಾರಾಂ, ಟಿ.ಭೋಗೇಶ್, ರಂಗಹನುಮಯ್ಯ, ಬಿ.ವಿ.ಜಯರಾಮು, ಬಿ.ಎಸ್. ಸುಹೇಲ್, ಮಂಜುನಾಥ್, ಪುರುಷೋತ್ತಮ್, ಗಾಣಕಲ್ ನಟರಾಜು, ಮೂರ್ತಿ, ಕೆ.ಸಿ. ಚಿಕ್ಕಣ್ಣ,ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಉಪಾಧ್ಯಕ್ಷ ಕಾರ್ತೀಕ್, ಜಯರಾಮು, ಕುಮಾರ್, ರಂಗನಾಥ್, ನಾಗರಾಜು, ಶಂಕರ್, ಜಯಣ್ಣ ಸೇರಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.