ದಾರ್ಶನಿಕರ ಬಗ್ಗೆ ನೃತ್ಯ ರೂಪಕ ಪ್ರದರ್ಶನವಾದರೆ ಒಳಿತು
ಕ.ಪ್ರ.ವಾರ್ತೆ ರಾಮನಗರ ಫೆ.23
ಬುದ್ಧ, ಬಸವೇಶ್ವರ, ಕನಕದಾಸರಂತಹ ದಾರ್ಶನಿಕರ ಬಗ್ಗೆ ನೃತ್ಯ ರೂಪಕಗಳು ಪ್ರದರ್ಶನವಾದರೆ ಅವರ ವಿಚಾರಧಾರೆಗಳು ಸುಲಭವಾಗಿ ಜನರನ್ನು ತಲುಪುತ್ತವೆ ಎಂದು ಮಾಚಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಮತ್ತು ಸಂಸ್ಕಣತಿ ಇಲಾಖೆಯ ಸಹಕಾರದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಶಾಂತಲಾ ಅಂತರ ರಾಜ್ಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೇ ದಿವ್ಯ ಸಂದೇಶ ನೀಡಿರುವ ಮಹಾನ್ ವ್ಯಕ್ತಿಗಳ ವಿಚಾರ ಧಾರೆಗಳು ನಮ್ಮ ಬದುಕಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುತ್ತವೆ ಎಂದರು.
ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಸಹಕಾರ ನೀಡಬೇಕು. ದೈತ್ಯ ಶಕ್ತಿ ಹೊಂದಿರುವ ಜನಪದ ಕಲೆಗಳಿಂದ ಒಂದು ದೇಶದ ಗತಿಯನ್ನೆ ಬದಲಿಸಬಲ್ಲದು. ಆದರೆ ಇಂದಿನ ಯುವ ಪೀಳಿಗೆ ಜನಪದದತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದರು. ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟುವ ಶಕ್ತಿ ಜಾನಪದ ಕಲೆಗಳಿಗಿದೆ.
ಜನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಮನುಷ್ಯನಲ್ಲಿರುವ ದುಷ್ಟ ಗುಣಗಳನ್ನು ಹೊಡೆದೋಡಿಸಿ, ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಬಹುದು ಎಂದು ಸಿಂಧ್ಯಾ ಹೇಳಿದರು.
ಕಡೆಗಣಿಸುವಂತಿಲ್ಲ: ಕಲಾ ಉಪಾಸಕರ ಮೂಲಕ ಪರಂಪರೆ ಉಳಿದಿದೆ. ಮುಂದಿನ ಪೀಳಿಗೆಗೆ ನಮ್ಮ ಭವ್ಯ ಸಂಸ್ಕೃತಿಯನ್ನು ಪರಿಚಯಿಸಲು ಕಲಾವಿದರ ಶ್ರಮವನ್ನು ಕಡೆಗಣಿಸುವಂತಿಲ್ಲ. ಕಲಾವಿದರು ಕಲೆಯನ್ನು ಪರಿಪೂರ್ಣವಾಗಿ ಕಲಿಯಲು ತಪಸ್ಸಿನಂತೆ ಅಭ್ಯಸಿಸಬೇಕು. ತಮ್ಮ ಶಿಷ್ಯರ ಸಾಧನೆಯು ಕಲೆ ಕಲಿಸಿದ ಗುರುಗಳಿಗೆ ಅರ್ಪಿಸಿದ ಕಾಣಿಕೆ ಆಗುತ್ತದೆ ಎಂದು ಖ್ಯಾತ ಗಾಯಕಿ ಡಾ.ಶ್ಯಾಮಲ.ಜಿ.ಭಾವೆ ತಿಳಿಸಿದರು.
ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನ ದುರ್ಬಳಕೆಯಾಗುತ್ತಿದೆ. ಇಲಾಖೆ ನೀಡುವ ಹಣದ ಮೇಲೆ ಕಣ್ಣಿಟ್ಟ ಕೆಲವು ಸಂಘ ಸಂಸ್ಥೆಗಳು, ಕೇವಲ ಹಣ ಕಬಳಿಸಲು ಮಾತ್ರ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಕಲಾವಿದರಿಗೆ ಯಾವುದೇ ಉಪಯೋಗವಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಮಾಲತೇಶ್ ಬಡಿಗೇರ್ ಅಭಿಪ್ರಾಯಪಟ್ಟರು.
ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ, ಕಾಂಗ್ರೆಸ್ ಮುಖಂಡ ಮರಿದೇವರು, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಕಲಾವಿದ ನಾರಾಯಣ್ ರಾವ್ ಮಾನೆ, ನೃತ್ಯ ಕಲಾವಿದೆ ಉಷಾದಾತರ್, ಆರ್.ವಿ.ಎಮ್. ಫೌಂಡೇಶನ್ ಆಸ್ಪತ್ರೆಯ ಮುಖ್ಯಸ್ಥ ಬಿ.ಟಿ.ಕೆ.ರೆಡ್ಡಿ, ಡಾ.ಎಸ್.ಎಲ್.ತಿಮ್ಮಯ್ಯ, ಭರತನಾಟ್ಯ ಕಲಾವಿದ ಪ್ರವೀಣ್‌ಕುಮಾರ್, ಗುರು ದೀಪಾಂಕರ್ ಸಂತೋಷ್, ಹರಿಂದನ್, ಮತ್ತಿತರರು ಭಾಗವಹಿಸಿದ್ದರು.
ಒಡಿಸ್ಸಾ, ಕೇರಳ, ಗೋವಾ, ಪಶ್ಚಿಮ ಬಂಗಾಳ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನಗರದ ಶಾಂತಲಾ ಚಾರಿಟಬಲ್ ಟ್ರಸ್ ಪ್ರತಿ ವರ್ಷವೂ ವಿವಿಧ ರಾಜ್ಯಗಳಿಂದ ಕಲಾವಿದರನ್ನು ಕರೆಸಿ, ಅನ್ಯ ರಾಜ್ಯಗಳ ಕಲೆಯನ್ನು ಇಲ್ಲಿಗೆ ಪರಿಚಯಿಸುವ ವಿಭಿನ್ನ ಕಾರ್ಯ ಕೈಗೊಳ್ಳುತ್ತಿದೆ.