ದೇಗುಲದಲ್ಲಿ ಸಂಭ್ರಮದ ಶತಚಂಡಿಕಾ ಯಾಗ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಶ್ರೀಮಾತೆ ಮುತ್ಯಾಲಮ್ಮ ದೇವಿ ಸನ್ನಿಧಿಯಲ್ಲಿ ನಡೆಯತ್ತಿರುವ ಸಂಭ್ರಮದ ಶತಚಂಡಿಕಾ ಯಾಗದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದಾರೆ. ದೇಗುಲದಲ್ಲಿ ಭಕ್ತಿ ವೈಭವ ಮನೆ ಮಾಡಿದ್ದು ಎಲ್ಲೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಶನಿವಾರದಿಂದ ಆರಂಭವಾಗಿರುವ 3 ದಿನಗಳ ವಿಶೇಷ ಕಾರ್ಯಕ್ರಮ ಈಗಾಗಲೇ ಹಲವು ವೈಶಿಷ್ಟ್ಯತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಶಕ್ತಿದೇವತೆಗಳ ಕೇಂದ್ರಸ್ಥಾನವಾಗಿರುವ ಮುತ್ಯಾಲಮ್ಮ ದೇವಿ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸಲಾಗಿದೆ. ನೂತನವಾಗಿ ನಿರ್ಮಿಸಲಾಗಿರುವ ಭವ್ಯ ದೇಗುಲದಲ್ಲಿ ಶ್ರೀಮಾತೆಯ ಪುನಃ ಪ್ರತಿಷ್ಠಾಪನೆ ಮಹೋತ್ಸವ, ಆಲಯಗೋಪುರ ಕಳಶ ಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ.
ಶ್ರೀಯೋಗೀಶ್ವರಿ ಸುಬ್ರಹ್ಮಣ್ಯಾನಂದಸ್ವಾಮಿ ಮಹಾರಾಜ್ ಸಂಸ್ಥಾನದ ಶ್ರೀದತ್ತಪೀಠ ಗುರುಗಳಾದ ಮಹರ್ಷಿ ಎನ್.ಗುರುದತ್ತ ಅವರ ಧಾರ್ಮಿಕ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಶನಿವಾರರಂದು ಗುರುಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಯಾಗಶಾಲಾ ಪ್ರವೇಶ, ಪುಣ್ಯಾಹವಾಚನ, ಪಂಚಗವ್ಯಮೇಳನ, ಚಂಡಿಕಾ ಪಾರಾಯಣ ಕ್ಷೀರವಾಸ, ವಾಸ್ತು ಮಂಡಲಾರ್ಚನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಮಹಿಳೆಯರು ಕಳಶಪೂಜೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ಕಳಶ ಪ್ರತಿಷ್ಠಾಪಿಸಿ ಪೂಜಿಸಿ ಧಾರ್ಮಿಕ ಭಕ್ತಿ ಭಾವ ಮೆರೆದರು.
ಭಾನುವಾರ ಗುರುದತ್ತರ ಮಾರ್ಗದರ್ಶದಲ್ಲಿ ಸುವಾಸಿನೀ ಪೂಜೆ, ಕನ್ಯಕಾ ಪೂಜೆ, ರತ್ನಾಧಿವಾಸ, ಚಿತ್ರಪಟಾಧಿವಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಶತಚಂಡಿಕಾಯಾಗದಲ್ಲಿ ವಿವಿಧೆಡೆಯಿಂದ ಬಂದಿದ್ದ ಹಲವು ಪುರೋಹಿತರು ನೇತೃತ್ವ ವಹಿಸಿದ್ದರು.
ಇಂದು ಕುಂಭಾಭಿಷೇಕ: ನೂತನ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಕಳಶ ಪ್ರತಿಷ್ಠಾಪನೆ ಮತ್ತು ಕಳಶ ಕುಂಭಾಭಿಷೇಕ ಕಾರ್ಯಕ್ರಮ ಫೆ.24ರ ಸೋಮವಾರ ನಡೆಯಲಿದೆ. ಬೆಳಗ್ಗೆ 9 ರಿಂದ 9.30ರ ಶುಭ ಮುಹೂರ್ತದಲ್ಲಿ ಮುತ್ಯಾಲಮ್ಮ ದೇವಿಯವರಿಗೆ ತತ್ವನ್ಯಾಸ, ಕಲಾನ್ಯಾ ಸಹಿತ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮರ್ಷಿ ಡಾ. ಆನಂದಗುರೂಜಿ ಮತ್ತು ಆದಿಶಂಕರಾಚಾರ್ಯ ತೋಟಕಾರ್ಯ ಪರಂಪರೆಯ ಎಡನೀರು ಮಠಾಧೀಶ ಕೇಶವಾನಂದಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ.