ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

20 ಲಕ್ಷ ದಾಟಿದೆ ಬೆಂ.ಗ್ರಾ. ಮತದಾರರ ಸಂಖ್ಯೆ

Rashmi Kasaragodu
Updated On : 25 Feb 2014, 2:33 am

ಮತ್ತೀಕೆರೆ ಜಯರಾಮ್
ರಾಮನಗರ: ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಮತದಾರರ ಸಂಖ್ಯೆ 20 ಲಕ್ಷ ದಾಟಿದೆ. ಕಳೆದ ಉಪ ಚುನಾವಣೆ ಬಳಿಕ ಈ ಕ್ಷೇತ್ರದಲ್ಲಿ 73 ಸಾವಿರಕ್ಕೂ ಅಧಿಕ ಮತದಾರರ ಸೇರ್ಪಡೆಯಾಗಿದೆ.
ರಾಜ್ಯ ರಾಜಧಾನಿಯೂ ಸಹಿತ ಮೂರು ಜಿಲ್ಲೆಗಳಲ್ಲಿ ಚಾಚಿಕೊಂಡ ಈ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ 1076000 ಪುರುಷರು, 1000667 ಮಹಿಳೆಯರು, 218 ಇತರರು ಸಹಿತ ಒಟ್ಟಾರೆ ಮತದಾರರ ಸಂಖ್ಯೆ 2076893ಕ್ಕೆ ಏರಿದೆ.
2013ರ ಆಗಸ್ಟ್ ಮಾಹೆಯಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ 986387 ಪುರುಷರು ಮತ್ತು 916976 ಮಹಿಳೆಯರು ಸಹಿತ 1903363 ಮತದಾರರು ಈ ಕ್ಷೇತ್ರದಲ್ಲಿದ್ದರು. ಈ ಬಾರಿಯ ಏರಿಕೆ ಪ್ರಮಾಣ 3.54 ಆಗಿರುವುದು ಗಮನಾರ್ಹ. ಹೊಸ ಸೇರ್ಪಡೆಯಲ್ಲಿ ಪ್ರಸಕ್ತ ವರ್ಷದ ಜನವರಿ ಮಾಹೆಗೆ 18 ವರ್ಷ ತುಂಬಿರುವ ಯುವ ಮತದಾರರೇ ಅಧಿಕ ಪ್ರಮಾಣದಲ್ಲಿದ್ದಾರೆ. ವರ್ಗಾವಣೆ, ಸ್ಥಳಾಂತರದ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ವರ್ಗಾಯಿಸಿರುವವರೂ ಇಲ್ಲಿ ಸೇರಿದ್ದಾರೆ.  
ರಾಜಧಾನಿಯದ್ದೇ ಸಿಂಹಪಾಲು: ಈ ಮೊದಲು ಕನಕಪುರ ಲೋಕಸಭಾ ಕ್ಷೇತ್ರ ಇದಾಗಿತ್ತು. 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರವೆಂದು ಬದಲಿಸಲಾಯಿತು. ಹೆಸರಿಗಷ್ಟೇ ಇದು ಗ್ರಾಮಾಂತರ ಕ್ಷೇತ್ರ. ಇಲ್ಲಿರುವ ಸಿಂಹಪಾಲು ಮತದಾರರು ನಗರ, ಪಟ್ಟಣದವರೇ ಆಗಿದ್ದಾರೆ.  
ಬೆಂಗಳೂರು ನಗರ ಜಿಲ್ಲೆಗೆ ಸೇರಿದ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲೇ 1100692 ಮತದಾರರಿದ್ದಾರೆ. ಇದು ಒಟ್ಟಾರೆ ಮತದಾರರ ಸಂಖ್ಯೆ ಪೈಕಿ ಅರ್ಧಕ್ಕೂ ಅಧಿಕವಾಗಿದೆ.
ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಈ 4 ವಿಧಾನಸಭಾ ಕ್ಷೇತ್ರಗಳ ಮತದಾರರ ಸಂಖ್ಯೆ 802409 ಆಗಿದ್ದರೆ, ನೆರೆಯ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 173792 ಮತದಾರರಿದ್ದಾರೆ.
ಬೆಂ.ದಕ್ಷಿಣದಲ್ಲೇ ಅಧಿಕ: ವಿಧಾನಸಭಾ ಕ್ಷೇತ್ರವಾರು ಮತದಾರರ ಪೈಕಿ ಬೆಂಗಳೂರು ದಕ್ಷಿಣ ಅಗ್ರಸ್ಥಾನ ಉಳಿಸಿಕೊಂಡಿದೆ. ಈ ಕ್ಷೇತ್ರದಲ್ಲಿ 247580 ಪುರುಷರು, 213866 ಮಹಿಳೆಯರು ಮತ್ತು 24 ಇತರರು ಸಹಿತ 461528ಮತದಾರರು ಪರಿಷ್ಕೃತ ಪಟ್ಟಿಯಲ್ಲಿದ್ದಾರೆ.
ಇದರ ನಂತರದ ಸ್ಥಾನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ್ದಾಗಿದೆ. ಅಲ್ಲಿ 184139 ಪುರುಷರು, 165713 ಮಹಿಳೆಯರು, 33 ಇತರರು ಸೇರಿದಂತೆ 349885 ಮತದಾರರಿದ್ದಾರೆ. ಆನೇಕಲ್ ಕ್ಷೇತ್ರದಲ್ಲಿ 154172 ಪುರುಷರು, 135065 ಮಹಿಳೆಯರು, 42 ಇತರರು ಸಹಿತ 289279 ಮತದಾರರಿದ್ದಾರೆ.
ಮಹಿಳೆಯರ ಪ್ರಾಬಲ್ಯ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಈ ಬಾರಿಯೂ ಮುಂದುವರೆದಿದೆ. ಅಂತೆಯೇ ಇತರೆ ಮತದಾರರ ಸಂಖ್ಯೆ ಅತಿ ಕಡಿಮೆ ಇರುವುದೂ ಅಲ್ಲೇ.  ಇನ್ನುಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಒಟ್ಟಾರೆ 203386 ಮತದಾರರನ್ನು ಹೊಂದಿದ ಚನ್ನಪಟ್ಟಣ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 99631 ಆಗಿದ್ದು, ಮಹಿಳೆಯರು 103751 ಇದ್ದಾರೆ. ಅಂತರ 4120 ಆಗಿದ್ದು, ಲಿಂಗಾನುಪಾತ ಪ್ರಮಾಣ  1028 ಎನ್ನುವುದು ವಿಶೇಷ. ಇಲ್ಲಿ ಇತರೆ ಮತದಾರರ ಸಂಖ್ಯೆ 4 ಮಾತ್ರವೇ.


ಇತರೆ ಕ್ಷೇತ್ರ ವಿವರ
ಕನಕಪುರದಲ್ಲಿ 106422 ಪುರುಷರು, 105828 ಮಹಿಳೆಯರು, 15 ಇತರರು ಸಹಿತ ಒಟ್ಟು ಮತದಾರರ ಸಂಖ್ಯೆ 212266 ಆಗಿದೆ. 104139 ಪುರುಷರು, 99672 ಮಹಿಳೆಯರು, 20 ಇತರರು ಸಹಿತ ಒಟ್ಟು 203831 ಮತದಾರರು ಮಾಗಡಿ ಕ್ಷೇತ್ರದಲ್ಲಿದ್ದಾರೆ.  ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನವಾದ ರಾಮನಗರದಲ್ಲಿ 92137 ಪುರುಷರು, 90772 ಮಹಿಳೆಯರು, 17 ಇತರರು ಸಹಿತ ಒಟ್ಟು 182926, ಕುಣಿಗಲಲ್ಕ್ಷೇತ್ರದಲ್ಲಿ 87780 ಪುರುಷರು, 85999 ಮಹಿಳೆಯರು, 13 ಇತರರು ಸಹಿತ ಒಟ್ಟು 173792 ಮತದಾರರಿದ್ದಾರೆ.



ಇನ್ನೂ ಸೇರ್ಪಡೆ ಸಂಭವ  
ಪರಿಷ್ಕರಣೆ ವೇಳೆ ಈ ಬಾರಿ ಸಾಕಷ್ಟು ತಿದ್ದುಪಡಿಗಳಾಗಿವೆ. ಅಂತಿಮ ಪಟ್ಟಿಯನ್ನು ನಿಗದಿತ ಕಡೆ ಪ್ರಕಟಿಸಿದ್ದೇವೆ ಎಂದು ಜಿಲ್ಲಾಡಳಿತ ಹೇಳಿಕೊಂಡರೂ ಅಂತಹ ಕಡೆ ಕಾಣದಾಗಿದೆ. ಕಣ್ತಪ್ಪಿನ ಜತೆಗೆ ದುರುದ್ದೇಶದಿಂದಲೂ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವ ದೂರುಗಳಿವೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಿರಂತರ ಪ್ರಕ್ರಿಯೆ. ಕೈಬಿಟ್ಟು ಹೋದವರು, 18 ವರ್ಷ ತುಂಬಿದವರು, ಸ್ಥಳಾಂತರವಾದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಅವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ಕ್ಷೇತ್ರದ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.

ಭಾರತ ಚುನಾವಣಾ ಆಯೋಗದ ಆದೇಶಾನುಸಾರ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಯುವ ಮತದಾರರ ಸೇರ್ಪಡೆಯಲ್ಲಿ ರಾಜ್ಯದ ಸರಾಸರಿ ಶೇಕಡ 1.2 ಆಗಿದ್ದು, ರಾಮನಗರ ಜಿಲ್ಲೆಯಲ್ಲಿ ಶೇಕಡ 2.24 ಆಗಿದೆ. ಕಾಲೇಜು ಮಟ್ಟದಲ್ಲಿ ನಡೆಸಿದ ಅಭಿಯಾನ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಟಿ ಡಾ.ಡಿ.ಎಸ್. ವಿಶ್ವನಾಥ್, ಜಿಲ್ಲಾಧಿಕಾರಿ, ರಾಮನಗರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement