ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಿವಿಗೆ ಹೂ ಇಡುವುದು ಎಚ್ಡಿಕೆ ಚಾಳಿ

Rashmi Kasaragodu
Updated On : 25 Feb 2014, 2:34 am

ಕ.ಪ್ರ.ವಾರ್ತೆ     ರಾಮನಗರ     ಫೆ.24
ತಲೆಗೆ ಟೋಪಿ, ಕಿವಿಗೆ ಹೂ ಇಡುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಚಾಳಿಯೇ ಹೊರತು ಕಾಂಗ್ರೆಸ್ ಸಂಸ್ಕೃತಿಯಲ್ಲ ಎಂದು ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ.
ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮೆಯಿಂದ ನೀರು ತುಂಬಿಸುವ ಶ್ರೀರಂಗ ಯೋಜನೆ ಮಂಜೂರು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ತಲೆಗೆ ಟೋಪಿ, ಕಿವಿಗೆ ಹೂ ಇಟ್ಟಿದೆ ಎನ್ನುವ ಕುಮಾರಸ್ವಾಮಿ ಟೀಕೆಗೆ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಜೇಬಿನಲ್ಲಿ ಇಟ್ಟಿರುತ್ತಾರೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಉನ್ನತ ಅಧಿಕಾರ ಸಿಗುವಲ್ಲಿ ರಾಮನಗರ ಜಿಲ್ಲೆಯೇ ಕಾರಣ. ಈ ಜಿಲ್ಲೆಗೆ ಅವರ ಕೊಡುಗೆ ಏನು ಇಂತಹ ಕೆಲಸಗಳನ್ನು ಅಧಿಕಾರದಲ್ಲಿದ್ದಾಗ ಅವರು ಮಾಡಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.  ಕುಮಾರಸ್ವಾಮಿ ಅವರು ಬೆಂಗಳೂರು ಬಿಡುವಾಗಲೇ ರಾಮನಗರ ಜಿಲ್ಲೆ ಜನತೆಯ ತಲೆಗೆ ಹಾಕಲು ಟೋಪಿ, ಕಿವಿಗೆ ಮುಡಿಸಲು ಹೂ ಇಟ್ಟುಕೊಂಡಿರುತ್ತಾರೆ. ಅವರ ಮೋಡಿ ಮಾತುಗಳಿಗೆ ಮರುಳಾಗುತ್ತಾ ಬಂದಿದ್ದ ಈ ಜಿಲ್ಲೆ ಜನತೆ ಎಚ್ಚೆತ್ತುಕೊಂಡಿದ್ದಾರೆ ಎಂದರು.
ಕೈ, ಕಾಲು ಹಿಡಿದಿದ್ದೇವೆ: ಕುಣಿಗಲ್ ಮತ್ತು ಮಾಗಡಿ ತಾಲೂಕುಗಳ 83 ಕೆರೆಗಳಿಗೆ ಹೇಮೆಯಿಂದ ನೀರು ತುಂಬಿಸುವ ರು.277.50 ಕೋಟಿ ವೆಚ್ಚದ ಶ್ರೀರಂಗ ಯೋಜನೆ ಮಂಜೂರು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಸಿಎಂ, ಸಚಿವರು, ಅಧಿಕಾರಿಗಳ ಕೈಕಾಲು ಹಿಡಿದು ಈ ಯೋಜನೆಯನ್ನು ನಾವು ಮಂಜೂರು ಮಾಡಿಸಿದ್ದೇವೆ. ಸಾಧ್ಯವಿದ್ದರೆ ಅಭಿವೃದ್ಧಿ ಕೆಲಸಕ್ಕೆ ಸಾಥ್ ನೀಡಿ, ಇಲ್ಲವೇ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದು ಅವರು ಕುಮಾರಸ್ವಾಮಿಗೆ ಸಲಹೆ ನೀಡಿದರು.
ತಾಂತ್ರಿಕ ಸಮ್ಮತಿ: ಯೋಜನೆ ಘೋಷಣೆಗೂ ಮುನ್ನವೇ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ನೀರಾವರಿ ತಜ್ಞರು, ತಾಂತ್ರಿಕ ತಜ್ಞರು ವರದಿ ನೀಡಿದ್ದಾರೆ. ಯೋಜನೆ ಬೋಗಸ್ ಎನ್ನಲು ಕುಮಾರಸ್ವಾಮಿ ಅವರೇನು ನೀರಾವರಿ ತಜ್ಞರೇ ಎಂದು ಅವರು ವ್ಯಂಗ್ಯವಾಡಿದರು.  ಹೇಮಾವತಿಯಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ 50ಕ್ಕೂ ಹೆಚ್ಚು ಕೆರೆಗಳನ್ನು ಅಲ್ಲಿನ ಶಾಸಕ ಸುರೇಶಗೌಡ ತುಂಬಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಕೆರೆ ತುಂಬುತ್ತವೆ ಎನ್ನುವ ಖುಷಿ ಬದಲು ಕುಮಾರಸ್ವಾಮಿ ಕರುಬುತ್ತಿದ್ದಾರೆ ಎಂದು ಛೇಡಿಸಿದರು.
 ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಕೆ.ರಮೇಶ್, ಮುಖಂಡರಾದ ಕಾಂತರಾಜ್ ಪಟೇಲ್, ನಟರಾಜ್, ಎಲ್.ಚಂದ್ರಶೇಖರ್  ಹಾಜರಿದ್ದರು.


ಸೋಮವಾರದ ಸುಳ್ಳು
ರಾಮನಗರ ಕ್ಷೇತ್ರಕ್ಕೆ ಪ್ರತಿ ಸೋಮವಾರ ಭೇಟಿ ನೀಡುವ ಕುಮಾರಸ್ವಾಮಿ ವಾಗ್ದಾನ ಸುಳ್ಳಾಗಿದೆ. ಅದೆಷ್ಟು ಸೋಮವಾರ ಅವರ ಭೇಟಿ ನಡೆದಿದೆ ಎನ್ನುವ ಲೆಕ್ಕ ನಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ ಎಂದು ಮಂಜುನಾಥ್ ಹೇಳಿದರು.  ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸದನದಲ್ಲಿ ಹಾಕುವ ಪ್ರಶ್ನೆಗಳು ವ್ಯವಹಾರಿಕವಾಗಿರುತ್ತವೆ. ಅವರು ಡೋಂಗಿ ರಾಜಕಾರಣ ಬಿಟ್ಟು, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡಲಿ ಎಂದು ತಿಳಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ತರಾಟೆಗೆ: ಸಿಪಿವೈ ಕೋಪತಾಪ



ಕ.ಪ್ರ.ವಾರ್ತೆ     ಚನ್ನಪಟ್ಟಣ    ಫೆ.24
ವೃದ್ಧಾಪ್ಯ ವೇತನ ಸೇರಿದಂತೆ ಅಗತ್ಯ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿಳಂಬ ಮಾಡುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಶಾಸಕ ಯೋಗೇಶ್ವರ್ ತರಾಟೆಗೆ ತೆಗೆದು ಕೊಂಡ ಪ್ರಸಂಗ ಸೋಮುವಾರ ನಡೆಯಿತು.
ತಾಲೂಕು ಕಚೇರಿಯ ಕೆಳ ಮಹಡಿಯಲ್ಲಿ ಇಲಾಖೆ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ನೀಡಲಾಗುವ ಮಾಶಾಸನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೆ ಸಾರ್ವಜನಿಕರು ಸಾಕಷ್ಟು ದೂರುಗಳ ಸುರಿಮಳೆ ಗರೆದರು. ಇದರಿಂದ ಕೆಂಡಮಂಡಲರಾದ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಾರ್ವಜನಿಕರನ್ನು ಸುಖಾ ಸುಮ್ಮನೆ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸುವಂತೆ ತಾಕೀತು ಮಾಡಿದ ಶಾಸಕರು, ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿ ಕೊಡುವಂತೆ ತಾಕೀತು ಮಾಡಿದರಲ್ಲದೆ ಒಂದು ವರ್ಷದಿಂದ ಕೆಲ ವೃದ್ಧಾಪ್ಯ ಮತ್ತು ಸಂಧ್ಯಾ ಸುರಕ್ಷ ಯೋಜನೆಯ ಅರ್ಜಿಗಳನ್ನು ಬಾಕಿ ಉಳಿಸಿ ಕೊಂಡಿರುವ ಬಗ್ಗೆ  ಆಕ್ಷೇಪ ವ್ಯಕ್ತಪಡಿಸಿದರು.

ಶ್ರೀಮುತ್ಯಾಲಮ್ಮ ದೇವಾಲಯದ ಉದ್ಘಾಟನಾ ವೈಭವ


ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿರುವ ಶ್ರೀಮಾತೆ ಮುತ್ಯಾಲಮ್ಮ ದೇವಿಯ ದೇವಾಲಯದ ನೂತನ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪುನಃ ಪ್ರತಿಷ್ಠಾಪನೆ, ನೂತನ ಆಲಯ ಗೋಪುರ ಕಳಶ ಕುಂಭಾಭಿಷೇಕ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬ್ರಹ್ಮರ್ಷಿ ಆನಂದ ಸಿದ್ಧಿಪೀಠ ಮಹರ್ಷಿ ದರ್ಪಣ ಖ್ಯಾತಿಯ ಜ್ಯೋತಿಷ್ಯ ತಜ್ಞ ಡಾ.ಆನಂದ ಗುರೂಜಿ ಸಮಕ್ಷಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ವಿವಿಧ ಸ್ವಾಮೀಜಿಗಳು, ಧಾರ್ಮಿಕ ಸಂವೇದನೆಗಳು ದೇಶ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ.
 ಭಕ್ತಿ, ದೈವ, ಪೂಜೆ ಇತ್ಯಾದಿ ವಿಚಾರಗಳು ಮನುಷ್ಯರಲ್ಲಿ ಆಧ್ಯಾತ್ಮಿಕ ಶಿಸ್ತನ್ನು ರೂಡಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಶಿಸ್ತು ಕಡಿಮೆಯಾಗುತ್ತಿದೆ. ದೈವತ್ವದ ಕುರಿತ ನಿಷ್ಠೆಯಲ್ಲಿ ಪ್ರಾಮಾಣಿಕ ಮನೋಭಾವಗಳು ಬೇಕಿದೆ ಎಂದರು.
ಶನಿವಾರದಿಂದ ಆರಂಭವಾದ 3 ದಿನಗಳ ಪೂಜಾ ಕಾರ್ಯಕ್ರಮಗಳು ಹಲವು ವೈಶಿಷ್ಟ್ಯತೆಗಳಿಂದ ಗಮನ ಸೆಳೆದವು.
 ಶ್ರೀಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಶಕ್ತಿದೇವತೆಗಳ ಕೇಂದ್ರಸ್ಥಾನವಾಗಿರುವ ಮುತ್ಯಾಲಮ್ಮ ದೇವಿ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸಲಾಗಿದೆ.
ನೂತನವಾಗಿ ನಿರ್ಮಿಸಲಾಗಿರುವ ಭವ್ಯ ದೇಗುಲದಲ್ಲಿ ಶ್ರೀಮಾತೆಯ ಪುನಃ ಪ್ರತಿಷ್ಠಾಪನೆ ಮಹೋತ್ಸವ, ಆಲಯಗೋಪುರ ಕಳಶ ಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವ ಅದ್ಧೂರಿಯಿಂದ  ನಡೆದವು. ಶ್ರೀಯೋಗೀಶ್ವರ ಸುಬ್ರಹ್ಮಣ್ಯಾನಂದಸ್ವಾಮಿ ಮಹಾರಾಜ್ ಸಂಸ್ಥಾನದ ಶ್ರೀದತ್ತಪೀಠ ಗುರುಗಳಾದ ಮಹರ್ಷಿ ಎನ್. ಗುರುದತ್ತ, ಡಾ. ಆನಂದಗುರೂಜಿ ಅವರ ಧಾರ್ಮಿಕ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು.  ನೂತನ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಕಳಶ ಪ್ರತಿಷ್ಠಾಪನೆ ಮತ್ತು ಕಳಶ ಕುಂಭಾಭಿಷೇಕ ಕಾರ್ಯಕ್ರಮ, ಮುತ್ಯಾಲಮ್ಮ ದೇವಿಯವರಿಗೆ ತತ್ವನ್ಯಾಸ, ಕಲಾನ್ಯಾ,ಸ ಸಹಿತ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದವು. ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement