ಜಿಲ್ಲಾ ಕೇಂದ್ರಕ್ಕಾಗಿ ನಗರಸಭಾ ಸದಸ್ಯರ ಧರಣಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂ.ಗ್ರಾ.ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಯಶಸ್ವಿಯಾಗಿ 2 ವಾರಗಳನ್ನು ಪೂರೈಸಿದೆ. ಸೋಮವಾರ ನಡೆದ ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರನೇಕರು ಭಾಗವಹಿಸಿದ್ದದ್ದು ವಿಶೇಷವಾಗಿತ್ತು.
ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘ ಮತ್ತು ನಗರಸಭಾ ಸದಸ್ಯರ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯರು ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘದ ಅನೇಕ ಪದಾಧಿಕಾರಿಗಳು ಅರ್ಹತೆ ಮತ್ತು ಕಾನೂನಾತ್ಮಕವಾಗಿ ದೊಡ್ಡಬಳ್ಳಾಪುರ ನಗರವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಬೇಕು. ಈ ಹಿಂದೆ ನೂತನ ಜಿಲ್ಲಾ ಕೇಂದ್ರಗಳನ್ನು ರಚನೆ ಮಾಡಿರುವ ರೀತಿ ನೀತಿಗಳು ಮತ್ತು ಮಾನದಂಡಗಳನ್ನು ಅನುಸರಿಸಿಯೇ ನಮ್ಮ ಬೇಡಿಕೆಯನ್ನು ಪರಿಗಣಿಸಲಿ. ನಗರಸಭಾ ಸದಸ್ಯರು ಪಕ್ಷಭೇದ ಮರೆತು ದೊಡ್ಡಬಳ್ಳಾಪುರ ನಗರದ ಹಕ್ಕನ್ನು ಪ್ರತಿಪಾದಿಸಬೇಕಿದೆ. ಈ ನಿಟ್ಟಿನಲ್ಲಿ ಎಂತಹ ಹೋರಾಟಕ್ಕೂ ಸಿದ್ಧ ಎನ್ನುವ ಸಂಕಲ್ಪ ಮಾಡಬೇಕಿದೆ ಎಂದರು.
ದೊಡ್ಡಬಳ್ಳಾಪುರಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಲೇ ಹಲವು ಸವಲತ್ತುಗಳು ಕೈಬಿಟ್ಟು ಹೋಗಿವೆ. ಬಿಟ್ಟು ಹೋಗಿರುವ ಅವಕಾಶಗಳನ್ನು ಪುನಃ ಪಡೆಯುವುದು ಮತ್ತು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಆಗ್ರಹಿಸುವುದು ನಮ್ಮ ಹಕ್ಕು. ಉಪವಿಭಾಗ ಕೇಂದ್ರ ಸ್ಥಳಾಂತರದ ಆದೇಶ ಹೊರಬಿದ್ದು ತಿಂಗಳಾದರೂ ಈ ಬಗ್ಗೆ ಯಾವುದೇ ಗಂಭೀರ ಪ್ರಯತ್ನ ನಡೆಯದಿರುವುದು ಖಂಡನೀಯ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ನಗರಸಭಾ ಸದಸ್ಯರು, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಹ್ತತಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇಂದು ಜೆಡಿಎಸ್ ಪ್ರತಿಭಟನೆ: ದೊಡ್ಡಬಳ್ಳಾಪುರವನ್ನು ಬೆಂ.ಗ್ರಾ.ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಬೆಂ.ಗ್ರಾ.ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಚ್. ಅಪ್ಪಯ್ಯಣ್ಣ ನೇತೃತ್ವದಲ್ಲಿ ಫೆ.25ರ ಮಂಗಳವಾರ ಬೆಳಗ್ಗೆ 10.30ಕ್ಕೆ ತಹಸೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಳ್ಳಿ ಜಾನಪದ ಕಲಾ ತಂಡದ ಸದಸ್ಯರು, ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯಿತಿ, ನಗರಸಭೆ ಮತ್ತು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ಪಕ್ಷದ ವಿವಿಧ ಘಟಕಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.