ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ರಾಮನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕಂದಾಯ ಭವನದ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶೀಘ್ರ ಬೇಡಿಕೆ ಈಡೇರಿಸಿ: ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಂತೆ ಹತ್ತು ವರ್ಷ ಸೇವೆ ಪೂರ್ಣಗೊಳಿಸಿದ ಎಲ್ಲ ದಿನಗೂಲಿ ನೌಕರರಿಗೂ ಇತರ ಸರ್ಕಾರಿ ನೌಕರರ ಸಮಾನ ವೇತನ, ರಜೆ ಸೌಲಭ್ಯ, ಹೊಸ ಪಿಂಚಣಿ ಯೋಜನೆ, ನಿವೃತ್ತಿ ಎಕ್ಸ್ಗ್ರೇಷಿಯಾ ಇನ್ನಿತರೆ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸೌಲಭ್ಯ ವಿಸ್ತರಿಸಬೇಕೆಂದು ಷರತ್ತು ವಿಧಿಸಿದ್ದರೂ ಅಧಿಸೂಚಿಸಿದಂತೆ ಜಾರಿಗೆ ತರಲು ಅವಶ್ಯ ನಿಯಮಗಳನ್ನು ಇನ್ನೂ ಜಾರಿಗೊಳಿಸಿಲ್ಲ. ಅಂತೆಯೇ ಒಂದು ವರ್ಷದೊಳಗೆ ಎಲ್ಲ ಅರ್ಹ ದಿನಗೂಲಿ ನೌಕರರ ಪಟ್ಟಿಯನ್ನು ಪ್ರಕಟಿಸಬೇಕೆಂದು ಅಧಿಸೂಚನೆಯಲ್ಲೇ ತಿಳಿಸಿದ್ದರೂ ಇದನ್ನೂ ಜಾರಿಗೆ ತಂದಿಲ್ಲ ಎಂದು ದೂರಿದರು.
ಹೋರಾಟಕ್ಕೆ ಸಜ್ಜು: ಸರ್ಕಾರವು ರಾಜ್ಯದಲ್ಲಿರುವ 27 ಸಾವಿರ ದಿನಗೂಲಿ ನೌಕರರಿಗೆ ದೊರಕಬೇಕಾದ ಸೌಲಭ್ಯಗಳಿಂದ ವಂಚಿತರನ್ನಾಗಿಸಿದೆ. ಈ ವಿಷಯವನ್ನು ರಾಜ್ಯಪಾಲರು, ಸಿಎಂ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವರು ಟೀಕಿಸಿದರು.
ನಮೋ ಟೀ ಸ್ಟಾಲ್ ಉದ್ಘಾಟನೆ
ವಿಜಯಪುರ: ದೇಶವನ್ನು ಕಟ್ಟುವ ನಾಯಕರು ಬೇಕು. ಆದರೆ ದೇಶವನ್ನು ಮಾರುವ ನಾಯಕರು ಬೇಡ. ಮೋದಿ ಟೀ ಮಾರುವವರಾಗಿದ್ದರು. ಆದರೇ ದೇಶ ಮಾರುವ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಮುಖಂಡ ನಾರಾಯಣಗೌಡ ತಿಳಿಸಿದರು.
ಇವರು ಪಟ್ಟಣದ ಪುರಸಭವನದ ಹತ್ತಿರದ ಶಾಂತಿ ಸಾಗರ್ ಹೊಟೇಲ್ ಬಳಿ ನರೇಂದ್ರ ಮೋದಿ ಟೀ ಸ್ಚಾಲ್ ಉದ್ಘಾಟಿಸಿ ಮಾತನಾಡಿದರು. ಯುಪಿಎ ಸರ್ಕಾರವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಭ್ರಷ್ಟಾಚಾರದಲ್ಲಿ ತೇಲುತ್ತಿದೆ. ದೇಶದ ಹಿತ ಕಾಯುವಂತ ನಾಯಕರಾಗಿರುವ ಮೋದಿಯವರನ್ನು ಪ್ರಧಾನಿಯಾಗಿ ಮಾಡೋಣ ಎಂದು ಕರೆ ನೀಡಿದರು. ತಾ. ಬಿಜೆಪಿ ಅಧ್ಯಕ್ಷ ರಾಜ್ಗೋಪಾಲ್ ಮಾತನಾಡಿದರು.