ಸದಸ್ಯರ ಸಹಕಾರದಿಂದ ಅಭಿವೃದ್ಧಿ ಸಾಧ್ಯ: ಎನ್. ನಾಗರಾಜಪ್ಪ
ಸೂಲಿಬೆಲೆ: ಗ್ರಾಪಂ ಸದಸ್ಯರ ಸಹಕಾರವಿದ್ದರೇ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಅಧಿಕಾರದಲ್ಲಿದ್ದಷ್ಟು ದಿನ ಸಾರ್ವಜನಿಕರಿಗೆ ಏನು ಮಾಡಿದ್ದೇವೆ ಎಂಬುದು ಮುಖ್ಯ. ಸೂಲಿಬೆಲೆ ಗ್ರಾಮ ಪಂಚಾಯಿತಿ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸದಸ್ಯರು, ಗ್ರಾಮಸ್ಥರ ಸಹಕಾರ ಕಾರಣ ಎಂದು ತಾಪಂ ಅಧಿಕಾರಿ ಎನ್. ನಾಗರಾಜಪ್ಪ ಹೇಳಿದರು.
ಸೂಲಿಬೆಲೆ ಗ್ರಾಪಂದಲ್ಲಿ 13 ವರ್ಷಗಳ ಕಾಲ ಕಾರ್ಯದರ್ಶಿ ಹಾಗೂ ಪಿಡಿಓ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಆನೇಕಲ್ ತಾಪಂ ಅಧಿಕಾರಿಯಾಗಿ ವರ್ಗಾವಣಿಗೊಂಡ ನಾಗರಾಜಪ್ಪ ಅವರಿಗೆ ಸೂಲಿಬೆಲೆ ಗ್ರಾಪಂದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
1997ರಲ್ಲಿ ಸೂಲಿಬೆಲೆ ಗ್ರಾಪಂಗೆ ಕಾರ್ಯದರ್ಶಿಯಾಗಿ ಬಂದಾಗ ಸ್ಥಳೀಯ ವರಮಾನ ಕೇವಲ 32 ಸಾವಿರವಿತ್ತು. ತದಾನಂತರ ಸರ್ಕಾರದ ನಾನಾ ಯೋಜನಗಳಲ್ಲಿನ ಹಣವನ್ನು ತಂದು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಮಳಿಗೆಗಳನ್ನು ಕಟ್ಟಿ ಈ ಮೂಲಕ ಗ್ರಾಪಂ ಆರ್ಥಿಕವಾಗಿ ಸದೃಢವಾಗಲು ಎಲ್ಲ ಸದಸ್ಯರು ಸಹಕರಿಸಿದರು. ನರೇಗ ಯೋಜನೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ತ್ಯಾಜ್ಯದಿಂದ ಎರೆಹುಳು ಗೊಬ್ಬರ ತಯಾರಿಕೆ, ಚರಂಡಿ-ರಸ್ತೆ ಅಭಿವೃದ್ಧಿ, ಗ್ರಾಪಂಗೊಂದು ಸುಸಜ್ಜಿತವಾದ ಕಟ್ಟಡ ನಿಮಾರ್ಣವಾಗಿದ್ದು, ವಿಶೇಷವಾಗಿ ನರೇಗ ಯೋಜನೆಯಲ್ಲಿ ಇಡಿ ಜಿಲ್ಲೆಗೆ ಅತಿ ಹೆಚ್ಚು ಅನುದಾನ ಬಳಿಸಿಕೊಂಡ ಗ್ರಾಪಂ ಎಂಬ ಖ್ಯಾತಿಗೆ ಸೂಲಿಬೆಲೆ ಪಾತ್ರವಾಯಿತು ಎಂದು ಹೇಳಿದರು.
ಪಿಡಿಒ ಸುಂದರ್, ತಾಪಂ ಮಾಜಿ ಸದಸ್ಯ ಚನ್ನಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಗೌಡ, ಆರ್.ಮುನಿರಾಜ್, ಗುತ್ತಿಗೆದಾರ ನಾಗೇಶ್, ಮುನಿರತ್ನಪ್ಪ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಕರ ವಸೂಲಿಗಾರ ನಾರಾಯಣಸ್ವಾಮಿ, ನಾಗವೇಣಿ, ಕವಿತಾ, ಮಂಜುನಾಥ್ ಸೇರಿದಂತೆ ಗ್ರಾಪಂ ಸದಸ್ಯರು, ಮಾಜಿ ಅಧ್ಯಕ್ಷರು ಸದಸ್ಯರು ಗ್ರಾಪಂ ಸಿಬ್ಬಂದಿ ಹಾಜರಿದ್ದು ನಾಗರಾಜ್ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.