ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ದೊಡ್ಡಬಳ್ಳಾಪುರಕ್ಕೆ ರಾಜನಾಥಸಿಂಗ್: ರ್ಯಾಲಿ

Rashmi Kasaragodu
Updated On : 26 Feb 2014, 1:09 am

ದೊಡ್ಡಬಳ್ಳಾಪುರ: ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥಸಿಂಗ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳ ಹಂತದ ಕಾರ್ಯಕರ್ತರ ಬೃಹತ್ ಸಮಾವೇಶ ದೊಡ್ಡಬಳ್ಳಾಪುರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಸಮಾವೇಶದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ 25 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ವಕ್ತಾರ, ಮಾಜಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕೆಲವರ ಹಿತಾಸಕ್ತಿಯನ್ನು ಮಾತ್ರ ರಾಜ್ಯದ ಹಿತಾಸಕ್ತಿಯಾಗಿ ಬಿಂಬಿಸುತ್ತಿದೆ. ಸಮಗ್ರ ಅಭಿವೃದ್ಧಿ ಚಿಂತನೆಯೇ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.
ಚಿಕ್ಕಬಳ್ಳಾಪುರ ಸಂಸದ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಹಾಸುಳ್ಳುಗಾರ ಎಂದು ಜರಿದ ಅವರು, ನೀರು ಕೊಡುತ್ತೇನೆ ಎಂದು ಹೇಳಿ ಕ್ಷೇತ್ರಕ್ಕೆ ಬಂದು ಜನರನ್ನು ನಂಬಿಸಿ ವಂಚಿಸಿದ್ದು ಅವರ ಮಹಾ ಸಾಧನೆ. ನುಡಿದಂತೆ ನಡೆದವರು ಎಂದು ಪುಸ್ತಕಗಳನ್ನು ಮುದ್ರಿಸಿ ಎಲ್ಲೆಡೆ ಬ್ಯಾನರ್ಗಳನ್ನು ಕಟ್ಟಿ ಪ್ರಚಾರದ ಘೀಳಿಗೆ ಬಿದ್ದಿರುವ ಅವರು ಬರೀ ಪ್ರಚಾರದಲ್ಲಿ ಅಭಿವೃದ್ಧಿ ಮಾಡಿದ್ದಾರೆಯೇ ಹೊರತು ನೈಜ ರೀತಿಯಲ್ಲಿ ಯಾವುದೇ ಗಣನೀಯ ಕೆಲಸಗಳನ್ನೂ ಮಾಡಿಲ್ಲ. ಎತ್ತಿನಹೊಳೆ ಶಂಕುಸ್ಥಾಪನೆ ಹಲವು ಬಾರಿ ಮುಂದಕ್ಕೆ ಹೋದ ಮೇಲೂ ಚುನಾವಣೆ ಸಂದರ್ಭ ಎದುರಿರುವಾಗ ಪಟ್ಟುಹಿಡಿದವರಂತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಹವಣಿಸುತ್ತಿರುವುದು ಚುನಾವಣೆ ಗಿಮಿಕ್ ಅಷ್ಟೇ ಎಂದರು.
ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಸೂಕ್ತ ಆಸನ ವ್ಯವಸ್ಥೆ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೇವನಹಳ್ಳಿ, ಯಲಹಂಕ, ನೆಲಮಂಗಲ, ಹೊಸಕೋಟೆಗಳಿಂದ ಬರುವ ಸಾವಿರಾರು ಕಾರ್ಯಕರ್ತರ ವಾಹನಗಳ ನಿಲುಗಡೆ ವ್ಯವಸ್ಥೆ, ವೇದಿಕೆ ನಿರ್ಮಾಣ ಸೇರಿದಂತೆ ಹಲವು ಸೌಕರ್ಯಗಳ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜಿ.ಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ ಮತ್ತಿತರರು ಸೇರಿದಂತೆ ಅನೇಕ ಘಟಕಗಳ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಸಮಾವೇಶ: ಬೆಳಗ್ಗೆ 10 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement