ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರಕ್ಕಾಗಿ ಜೆಡಿಎಸ್ ಚಳವಳಿ

Rashmi Kasaragodu
Updated On : 26 Feb 2014, 1:08 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಘಟಕದ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.
 ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 29 ಗ್ರಾಮ ಪಂಚಾಯಿತಿಗಳು, 10 ಪೊಲೀಸ್ ಠಾಣೆಗಳು, ಸುಮಾರು 4 ಸಾವಿರ ಹೆಕ್ಟೇರ್ ಅರಣ್ಯಭೂಮಿ ಮತ್ತು ಸುಮಾರು 70 ಸಾವಿರ ಹೆಕ್ಟೇರ್ ಭೂಪ್ರದೇಶ ಹೊಂದಿರುವ ಜಿಲ್ಲೆಯ ಅತಿ ದೊಡ್ಡ ತಾಲೂಕು ದೊಡ್ಡಬಳ್ಳಾಪುರ. ಜೊತೆಗೆ ಶೈಕ್ಷಣಿಕವಾಗಿ, ಕೈಗಾರಿಕೋದ್ಯಮ, ಸಾರಿಗೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮತ್ತು ಅಂಕಿ-ಅಂಶಗಳ ಆಧಾರದಲ್ಲಿ ಮುಂದಿದೆ. ಆಡಳಿತಾತ್ಮಕವಾಗಿ ಅಧಿಕೃತ ಉಪವಿಭಾಗ, ನಗರಸಭೆ ಸೇರಿದಂತೆ ಅನೇಕ ಸವಲತ್ತುಗಳನ್ನು ಹೊಂದಿರುವ ಏಕೈಕ ತಾಲೂಕು ಎನಿಸಿರುವ ದೊಡ್ಡಬಳ್ಳಾಪುರವನ್ನು ಈ ಕೂಡಲೇ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಬಂದಿಲ್ಲ: ಸರ್ಕಾರದಿಂದ ಸ್ಥಳಾಂತರ ಆದೇಶವಾಗಿ ತಿಂಗಳಾದರೂ ಉಪವಿಭಾಗಾಧಿಕಾರಿಗಳ ಕಚೇರಿ ದೊಡ್ಡಬಳ್ಳಾಪುರಕ್ಕೆ ಬಂದಿಲ್ಲ. ಈ ಬಗ್ಗೆ ಗಂಭೀರ ಒತ್ತಡತಂತ್ರ ಮುಖ್ಯವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವುದರೊಳಗೆ ಕಚೇರಿ ಸ್ಥಳಾಂತರವಾಗಲೇ ಬೇಕು. ಅರ್ಹತೆಯ ಆಧಾರದಲ್ಲಿ ನಮ್ಮೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ. ಈ ನಿಟ್ಟಿನಲ್ಲಿ ಆಡಳಿತ ಯಂತ್ರ ಪಾರದರ್ಶನವಾದ ಅಂಕಿ-ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. ವರದಿ ಸಲ್ಲಿಸುವ ಮುನ್ನ ಸಂಬಂಧಪಟ್ಟ ತಾಲೂಕುಗಳ ಅರ್ಹತೆ ಮತ್ತು ಅವಕಾಶಗಳ ಸಮಗ್ರ ವೈಜ್ಞಾನಿಕ ಮಾಹಿತಿ ಕಲೆಹಾಕಬೇಕು. ಅದಾವುದನ್ನೂ ಮಾಡದೆ ಅಧಿಕಾರಿಗಳು ಕೊಟ್ಟ ಅಂಕಿ-ಅಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಿಕೊಡುವುದು ಸರಿಯಲ್ಲ. ಈ ಕೂಡಲೇ ಪಾರದರ್ಶಕ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಜಿಲ್ಲಾ ಕೇಂದ್ರ ಪಡೆಯುವವರೆಗೆ ಹೋರಾಟ ನಿಲ್ಲದು ಎಂದು ಘೋಷಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಅಪ್ಪಯ್ಯಣ್ಣ ಸೇರಿದಂತೆ ಅನೇಕ ಹಿರಿಯ ಮುಖಂಡರು, ಪಕ್ಷದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಗ್ರಾಮಪಂಚಾಯಿತಿಗಳ ಅನೇಕ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಸಹಕಾರ ಸಂಘಗಳ ಪದಾಧಿಕಾರಿಗಳು, ವಿವಿಧ ಘಟಕಗಳ ಮುಖಂಡರು ಮತ್ತು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
ಗೀತಗಾಯನದ ಮೂಲಕ ಪ್ರತಿಭಟನೆ: ಇದೇ ಸಂದರ್ಭದಲ್ಲಿ ಹಳ್ಳಿ ಜಾನಪದ ಕಲಾ ತಂಡದ ನೇತೃತ್ವದಲ್ಲಿ ಎಚ್.ಎ.ನಾಗರಾಜ್, ಕಂಟನಕುಂಟೆ ಅಶ್ವತ್ಥ್ ಸಂಗಡಿಗರಿಂದ ಜಾನಪದ ಗೀತೆಗಳು ಮತ್ತು ಜಾಗೃತಿ ಗೀತೆಗಳ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು. ತಮಟೆ ಬಾರಿಸುವ ಮೂಲಕ ವಿವಿಧ ದೇಸೀ ಪದಗಳನ್ನು ಹಾಡುವ ಮೂಲಕ ಜಿಲ್ಲಾ ಕೇಂದ್ರದ ದನಿಯನ್ನು ವಿಧಾನಸೌಧಕ್ಕೆ ಮುಟ್ಟಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ನಂತರ ಪ್ರತಿಭಟನಾ ಸ್ಥಳದಲ್ಲೇ ಕಾರ್ಯಕರ್ತರು ಊಟ ಮಾಡುವ ಮೂಲಕ ವಿನೂತನ ಧರಣಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement