ಬನ್ನೇರುಘಟ್ಟ ಗ್ರಾಪಂ ಅಧ್ಯಕ್ಷ ಬಂಧನ, ಬಿಡುಗಡೆ
ಆನೇಕಲ್ಲು: ಅರಣ್ಯ ಇಲಾಖೆಯ ಒತ್ತುವರಿ ಜಮೀನು ತೆರವು ಹಾಗೂ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸಿದರೆಂಬ ಆರೋಪದ ಮೇರೆಗೆ ಬನ್ನೇರುಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮದನಗಿರಿ ಹಾಗೂ ಸದಸ್ಯ ವೆಂಕಟೇಶ್ ಅವರನ್ನು ಬಂಧಿಸಿದ್ದ ಬನ್ನೇರುಘಟ್ಟ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶನಿವಾರ ನ್ಯಾಯಾಂಗ ಬಂಧನಕ್ಕೆ ಆದೇಶವಾದ ನಂತಹ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ವಿಕ್ಟೋರಿಯ ಹಾಗೂ ಜಯದೇವ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದರು. ನಂತರ ಮಂಗಳವಾರ ನ್ಯಾಯಾಲಯಕ್ಕೆ ಕರೆತರಲಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ದೀರ್ಘ ತಪಾಸಣೆ ವರದಿ ಆಧಾರದ ಮೇರೆಗೆ ನ್ಯಾಯಾಲಯ ಜಾಮೀನು ನೀಡಿತು ಎಂದು ಬನ್ನೇರುಘಟ್ಟ ಪಿಎಸ್ಸೈ ನರೇಂದ್ರ ಕುಮಾರ್ ತಿಳಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನ ಬಿಡುಗಡೆಯಿಂದ ಬನ್ನೇರುಘಟ್ಟ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ಸಂಜೆ ಪಂಚಾಯ್ತಿ ಕಚೇರಿ ಬಳಿ ಸಭೆ ಸೇರಿ ರಸ್ತೆ ತೆರವಿನ ಬಗ್ಗೆ ಚರ್ಚಿಸಿದರು.