ಮಾ.1 ರಂದು ಬಹಿರಂಗ ಅಧಿವೇಶನ
ರಾಮನಗರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ವಿಷಯದಲ್ಲಿ ರಾಮನಗರ ಜಿಲ್ಲೆಯ ಜನಪ್ರತಿನಿಧಿಗಳ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು ಸ್ಪಷ್ಟನೆಗಾಗಿ ನಗರದಲ್ಲಿ ಮಾ.1 ರಂದು ಬಹಿರಂಗ ಅಧಿವೇಶನ ಆಯೋಜನೆ ಮಾಡಲಾಗಿದೆ.
ನಗರದ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ಅಂದು ಬೆಳಗ್ಗೆ 10ಕ್ಕೆ ಅಧಿವೇಶನ ನಡೆಯಲಿದೆ. ರಾಮನಗರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಈ ಐತಿಹಾಸಿಕ ಮತ್ತು ವಿಶಿಷ್ಟ ಅಧಿವೇಶನವನ್ನು ಆಯೋಜಿಸಲಾಗಿದೆ ಸಮಿತಿ ಅಧ್ಯಕ್ಷ ಸು.ತ.ರಾಮೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಅಪ್ಸರ್ ಆಗಾ, ರಾಮಚಂದ್ರಗೌಡ, ಇ.ಕೃಷ್ಣಪ್ಪ ಸಹಿತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಅಧಿವೇಶನದಲ್ಲಿ ನಿಲವು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು, ಪೌರ ಸಂಸ್ಥೆಗಳು, ಸಹಕಾರ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಚಿವ, ಸಂಸದ, ಶಾಸಕರ ಅಭಿಪ್ರಾಯ ಘೋಷಣೆ ಮತ್ತು ನಿಲವು ಸ್ಪಷ್ಟನೆಯನ್ನು ಸಾಕ್ಷೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಗುರುತರ ಜವಬ್ದಾರಿ: ಸತತ ಕಾಡುತ್ತಿರುವ ಭೀಕರ ಬರದಿಂದ ಜಲ ಮೂಲಗಳು ಬತ್ತಿವೆ. ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಗಳು ವಿಫಲವಾಗಿವೆ. ಕುಡಿಯುವುದಕ್ಕೂ ಶುದ್ಧ ಮತ್ತು ಸಮರ್ಪಕ ನೀರು ಸಿಗದೆ ಪರಿತಪಿಸುವ ಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಜಿಲ್ಲೆ ಜನಪ್ರತಿನಿಧಿಗಳು ಗುರುತರ ಜವಬ್ದಾರಿ ನಿರ್ವಹಿಸಲು ಪಕ್ಷಾತೀತವಾಗಿ ಸಂಕಲ್ಪತೊಡುವುದು ಅಗತ್ಯ ಎಂದು ರಾಮೇಗೌಡ ಹಾಗೂ ಪುಟ್ಟಸ್ವಾಮಿ ಹೇಳಿದರು.
ಲಕ್ಷಾಂತರ ತೆಂಗು, ಮಾವು ಮತ್ತಿತರೆ ಮರಗಳು ಒಣಗಿ ನಿಂತಿವೆ. ಕೃಷಿ ಕ್ಷೇತ್ರದ ಹಿನ್ನೆಡೆಯಿಂದ ರೈತ ಸಮುದಾಯದ ಆರ್ಥಿಕ ಬವಣೆ ಹೇಳತೀರದಾಗಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ತಜ್ಞ ಪರಮಶಿವಯ್ಯ ವರದಿ ಪ್ರಕಾರ ಶಾಶ್ವತ ನೀರಾವರಿ ಯೋಜನೆ ಜಾರಿ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಅವರು ಒತ್ತಾಯಿಸಿದರು.
ಪಶ್ಚಿಮಘಟ್ಟ ಪ್ರದೇಶದ ಸಾಂಪ್ರದಾಯಿಕ ಜಲ ಮೂಲಗಳಿಂದ ಈ ಜಿಲ್ಲೆಗೆ ಜೀವ ಜಲ ತರುವ ಕೆಲಸವಾಗಬೇಕು. ಹೇಮಾವತಿ, ಕಾವೇರಿ, ಶಿಂಷಾ ನದಿಗಳಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ತುರ್ತಾಗಿ ಆಗಬೇಕು. ಕಾವೇರಿ ಸಂಗಮದಿಂದಲೂ ನೀರು ಪೂರೈಕೆಗೆ ಯೋಜನೆ ಜಾರಿಯಾಗಬೇಕು ಎಂದು ಅವರು ಸಲಹೆ ನೀಡಿದರು.
ಕಣ್ಣೊರೆಸುವ ತಂತ್ರ: ಎತ್ತಿನಹೊಳೆ ಯೋಜನೆಗೆ ಸ್ವತಃ ಪರಮಶಿವಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಕಣ್ಣೊರೆಸುವ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ. ಅದನ್ನು ಕೈಬಿಟ್ಟು, ಬರದ ಬವಣೆಗೆ ತುತ್ತಾಗಿರುವ ಬಯಲುಸೀಮೆಯ 9 ಜಿಲ್ಲೆಗಳ 43 ತಾಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಆಗಬೇಕೆಂದು ರಾಮೇಗೌಡ ಮತ್ತು ಪುಟ್ಟಸ್ವಾಮಿ ಪ್ರತಿಪಾದಿಸಿದರು.
ಎತ್ತಿನಹೊಳೆಯಿಂದ ವಾರ್ಷಿಕ ನೀರಿನ ಲಭ್ಯತೆ 24 ಟಿಎಂಸಿ ಮಾತ್ರವೇ. ಆದರೆ, 9 ಜಿಲ್ಲೆಗಳಿಗೆ ಅಗತ್ಯವಿರುವುದು 443 ಟಿಎಂಸಿ ನೀರು. ಹೀಗಾಗಿ ಎತ್ತಿನಹೊಳೆ ಯೋಜನೆ ಜಾರಿಗೆ ತಂದು, ಯಾವ ಜಿಲ್ಲೆಗೆ ನೀರು ಕೊಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಎತ್ತಿನಹೊಳೆ ಯೋಜನೆ ಕಾರ್ಯಗತ ವಿಷಯದಲ್ಲಿ ಪುನರ್ಪ್ರಿಶೀಲಿಸುವುದು ಅಗತ್ಯ ಎಂದು ಅವರು ಆಗ್ರಹಿಸಿದರು.
500 ಟಿಎಂಸಿ ಲಭ್ಯ: ಕೃಷ್ಣ ಎ ಮತ್ತು ಬಿ ಸ್ಕೀಂ, ಕಾವೇರಿ ಕೊಳ್ಳದಿಂದ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 500 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಈ ನಿಟ್ಟಿನಲ್ಲಿ 7 ವಿವಿಧ ಯೋಜನೆಗಳನ್ನು ಸಿದ್ಧಪಡಿಸಿರುವ ಸರ್ಕಾರವು ಕೇವಲ ಎತ್ತಿನಹೊಳೆ ಯೋಜನೆಯೊಂದನ್ನೇ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ. ಇದನ್ನು ಪ್ರಬಲವಾಗಿ ವಿರೋಧಿಸಬೇಕಿದೆ ಎಂದು ಅವರು ತಿಳಿಸಿದರು.
ನೇತ್ರಾವತಿ ತಿರುವು ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಕೆಲವರು ವಿರೋಧಿಸುತಿದ್ದಾರೆ. ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಬವಣೆಯಿಂದ ಕೃಷಿ ಕ್ಷೇತ್ರ, ಆಹಾರ ಉತ್ಪಾದನೆ ಮಾತ್ರವಲ್ಲದೆ ಮನುಕುಲ ಸಹಿತ ಜೀವ ವೈವಿಧ್ಯತೆಯೇ ಹಾಳಾಗುತ್ತಿರುವುದನ್ನು ಗಮನಿಸಬಾರದೇಕೆ ಎಂದು ಅವರು ಪ್ರಶ್ನಿಸಿದರು.
ಬಯಲಸೀಮೆಯ ಜಿಲ್ಲೆಗಳಲ್ಲಿ ಕೈಗಾರಿಕಾ ಆಕ್ರಮಣ ನಡೆಯುತ್ತಿದೆ. ಈ ಜಿಲ್ಲೆಗಳಿಗೆ ನೀರಾವರಿ ಯೋಜನೆ ಜಾರಿಯಾಗುವುದಕ್ಕೆ ಬಂಡವಾಳ ಶಾಹಿಗಳು ಅಡ್ಡಗಾಲಾಗಿದ್ದಾರೆ ಎಂದು ಅವರು ಆರೋಪಿಸಿದರು. ಗೋಷ್ಠಿಯಲ್ಲಿ ಸತ್ಯನಾರಾಯಣ ಮತ್ತಿತರರಿದ್ದರು.