'ಹೇಮೆಯಿಂದ ನೀರು ಹರಿಸಲು ಎಚ್ಡಿಕೆ ವಿರೋಧವಿಲ್ಲ'
ರಾಮನಗರ: ಶಾಶ್ವತ ನೀರಾವರಿ ಯೋಜನೆ ಜಾರಿ ವಿಷಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ಹೋರಾಟಕ್ಕೆ ಇಳಿದಿದ್ದಾರೆ. ಮಾಗಡಿಗೆ ಹೇಮೆಯಿಂದ ನೀರು ಹರಿಸಲು ಅವರಿಂದ ತಕರಾರಿಲ್ಲ. ಆದರೆ, ಯೋಜನೆಯಲ್ಲಿರುವ ತಾಂತ್ರಿಕ ಲೋಪಗಳನ್ನು ಸರಿಪಡಿಸಬೇಕೆಂಬುದಷ್ಟೇ ಅವರ ಕಾಳಜಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ರಾಜು ಸ್ಪಷ್ಟಪಡಿಸಿದ್ದಾರೆ. ಹೇಮಾವತಿಯಿಂದ ಮಾಗಡಿಗೆ ನೀರು ಹರಿಸುವುದಕ್ಕೆ ಜೆ.ಎಚ್. ಪಟೇಲ್ ನೇತೃತ್ವದ ಜನತಾದಳ ಸರ್ಕಾರದಲ್ಲೇ ಹೈಪವರ್ ಕಮಿಟಿ ರಚಿಸಲಾಗಿತ್ತು. ಎಸ್.ಎಂ. ಕೃಷ್ಣ ಸರ್ಕಾರವೂ ಯೋಜನೆ ಪರ ಕಾಳಜಿ ವಹಿಸಿತ್ತು. ಇದೀಗ ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಸದರಿ ಯೋಜನೆ ತನ್ನದೇ ಎನ್ನುವಂತೆ ಬೀಗುತ್ತಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕಾಮಾಲೆ ಕಣ್ಣಿನ ಮಂಜು: ನೀರಾವರಿ ಯೋಜನೆಯನ್ನು ಮುಂದಿಟ್ಟುಕೊಂಡು ಮಂಜುನಾಥ್ ಮತ್ತು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಇಳಿದಿದೆ. ಯೋಜನೆ ರೂಪಿಸುವುದರಲ್ಲಿ ಜೆಡಿಎಸ್ ಪಾಲು ಇದೆ. ಯೋಜನೆ ಜಾರಿಗೊಂಡು, ಮಾಗಡಿ ತಾಲೂಕಿಗೆ ನೀರು ಹರಿದಲ್ಲಿ ಜೆಡಿಎಸ್ ಸ್ವಾಗತಿಸುತ್ತದೆ. ಮಂಜುನಾಥ್ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು ಎಂದು ಎಚ್ಚರಿಸಿದರು. ಹೇಮಾವತಿಗೆ ಕುಮಾರಸ್ವಾಮಿ ವಿರೋಧವಿದೆ ಎನ್ನುವಂತೆ ಬಿಂಬಿಸಲು ಮಂಜುನಾಥ್ ಹುನ್ನಾರ ನಡೆಸುತ್ತಿದ್ದಾರೆ. ರಾಮನಗರದಲ್ಲಿ ಮಂಚನಬಲೆಯಿಂದ ನೂರಾರು ಕೋಟಿ ರು. ವೆಚ್ಚದಲ್ಲಿ ಕಾಲುವೆ ನಿರ್ಮಿಸಿ, ನೀರನ್ನೇ ಹರಿಸಿಲ್ಲ. ಈ ನಿದರ್ಶನ ಕಣ್ಮುಂದೆ ಇರುವುದರಿಂದಲೇ ಹೇಮಾವತಿ ಯೋಜನೆಯೂ ಹಣ ಲೂಟಿಗೆ ದಾರಿ ಆಗುವುದು ಬೇಡವೆನ್ನುವುದಷ್ಟೇ ಕುಮಾರಸ್ವಾಮಿ ಕಾಳಜಿ ಎಂದರು.
ಕುಮಾರಸ್ವಾಮಿ, ಬಾಲಕೃಷ್ಣ ಅವರಿಬ್ಬರೂ ರೈತರ ಮಕ್ಕಳು. ಅವರಿಗೆ ರೈತರ ಪರ ಕಾಳಜಿ ಇದ್ದು, ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದಾರೆ. ಮಂಜುನಾಥ್ ಯಾವ ರೀತಿ ಎನ್ನು ವುದು ಬಿಡದಿ ಭಾಗದ ರೈತರಿಗೆ ಚೆನ್ನಾಗಿ ಗೊತ್ತಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಟಪ್ಪ ಆರೋಪಿಸಿದರು.