ಆನೇಕಲ್ ತಾಪಂ ಮೇಲೆ ಬಿಜೆಪಿ ಬಾವುಟ
ಆನೇಕಲ್ಲು: ಆನೇಕಲ್ ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾದಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮ್ಜದ್ ಪಾಷ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷ ಮುರಳಿ ಕೃಷ್ಣ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿತ್ತು. ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧ ಆಯ್ಕೆ ಸುಗಮವಾಯಿತು ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಾಗರಾಜು ತಿಳಿಸಿದರು.
27 ಸದಸ್ಯ ಬಲದ ತಾಲೂಕು ಪಂಚಾಯ್ತಿಯಲ್ಲಿ 18 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದಾರೆ.
ಅಧ್ಯಕ್ಷ ಅಮ್ಜದ್ ಪಾಷಾರನ್ನು ಅಭಿನಂದಿಸಿದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಅಲ್ಪ ಸಂಖ್ಯಾತರ ನಿಜವಾದ ಮಿತ್ರ. ತಾಲೂಕು ಪಂಚಾಯ್ತಿಯ ಸಾಮಾನ್ಯ ಸ್ಥಾನಕ್ಕೆ ಅಲ್ಪಸಂಖ್ಯಾತ ಬಂಧುಗಳನ್ನು ಆಯ್ಕೆ ಮಾಡುವ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಹೋದರತೆಗೆ ಬಿಜೆಪಿ ಬದ್ಧವಾಗಿದೆ. ದೇಶದ ಎಲ್ಲ ವರ್ಗದ ಜನತೆ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದರು.
ನೂತನ ಅಧ್ಯಕ್ಷ ಅಮ್ಜದ್ ಪಾಷಾ ಮಾತನಾಡಿ ತಾಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ತಾಲೂಕು ಪಂಚಾಯ್ತಿ ಆಸ್ತಿಗಳನ್ನು ಸಂಚಯಿಸಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲಾಗುವುದು. 3 ವರ್ಷಗಳ ಅನುಭವದಲ್ಲಿ ತಾಲೂಕಿನ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದು ಗ್ರಾಮ ಪಂಚಾಯ್ತಿಗಳನ್ನು ಸಬಲೀಕರಣ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಕೆ.ಬಿ. ಶಿವಪ್ಪ, ಬಿ.ಜಿ. ಆಂಜಿನಪ್ಪ, ಅತ್ತಿಬೆಲೆ ಬಸವರಾಜು, ಮುರಳಿಕೃಷ್ಣ, ಸೋನಿ, ವಾಸು, ಗಣೇಶ್ ಇದ್ದರು.