ಎಂಜಿನಿಯರ್ ಶಂಕರಪ್ಪ ಸಸ್ಪೆಂಡ್
ರಾಮನಗರ: ಕರ್ತವ್ಯಲೋಪ, ನಿರ್ಲಕ್ಷ್ಯ ಮತ್ತು ನರೇಗಾ ಯೋಜನೆ ಕಾಮಗಾರಿ ಅವ್ಯವಹಾರಕ್ಕೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಜಿ.ಪಂ.ನ ಚನ್ನಪಟ್ಟಣ ಉಪ ವಿಭಾಗದ ಸಹಾಯಕ ಎಂಜಿನಿಯರ್ ಎಂ.ಎಲ್. ಶಂಕರಪ್ಪ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.
ಶಂಕರಪ್ಪ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಅಮಾನತು ಆದೇಶ ಹೊರಡಿಸಿರುವುದಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಒ ವರದಿ ಹಿನ್ನೆಲೆ: ನರೇಗಾ ಯೋಜನೆಯಡಿ ಅತಿ ಹೆಚ್ಚು ವೆಚ್ಚ ಮಾಡಿರುವ ಗ್ರಾ.ಪಂ.ಗಳ ಕಾಮಗಾರಿಗಳ ತಪಾಸಣೆ ನಡೆಸಿ, ಚನ್ನಪಟ್ಟಣ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನೀಡಿರುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನರೇಗಾ ಯೋಜನೆಯ ಸಿವಿಲ್ ಕಾಮಗಾರಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗಿ ನಿಯಮಾನುಸಾರ ಯಾವುದೂ ಸಮರ್ಪಕವಾಗಿಲ್ಲ. ಕಾಮಗಾರಿಯ ನಾಮಫಲಕಗಳನ್ನು ಹಾಕಿರುವುದಿಲ್ಲ ಎಂದು ಶಂಕರಪ್ಪ ವಿರುದ್ಧ ಆರೋಪವಿದೆ.
ಪ್ರಮುಖ ಆರೋಪಗಳು: ಎನ್‌ಎಂಆರ್‌ನಲ್ಲಿ ಕೂಲಿ ಕಾರ್ಮಿಕರ ಸಹಿ ಇರುವುದಿಲ್ಲ ಮತ್ತು ಕಾರ್ಯಪಾಲಕ ಅಭಿಯಂತರರ ಸಹಿಯನ್ನೂ ಪಡೆದಿಲ್ಲದಿರುವುದು ರುಜುವಾತಾಗಿದೆ. ಹೀಗಾಗಿ ಶಂಕರಪ್ಪ ವಿರುದ್ಧ ನರೇಗಾ ಯೋಜನೆಯ ನಿಯಮ 25ರಡಿ ಶಿಸ್ತು ಕ್ರಮ ಜರುಗಿಸಲಾಗಿತ್ತು.
ಜಿ.ಪಂ. ಸಿಇಒ ಸೂಚನೆ ಮೇರೆಗೆ ಫೆ.15ರಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಗೋಪಿನಾಥ್ ಅವರು ಚನ್ನಪಟ್ಟಣ ಉಪ ವಿಭಾಗ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಶಂಕರಪ್ಪ ಕಚೇರಿಯಲ್ಲಿ ಹಾಜರಿರಲಿಲ್ಲ. ಕಚೇರಿಯ ಚಲನವಲನ ವಹಿಯಲ್ಲೂ ನಮೂದಿಸಿರಲಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕಚೇರಿ ಕೆಲಸದ ನಿಮಿತ್ತ ರಾಮನಗರಕ್ಕೆ ತೆರಳಿರುವುದಾಗಿ ತಿಳಿಸಿದ್ದರು. ಅವರು ವಹಿಸಿಕೊಂಡಿರುವ ಹುಣಸನಹಳ್ಳಿ ಗ್ರಾಮದ ಅಂಬೆಡ್ಕರ್ ಭವನದ ಅಪೂರ್ಣ ಕಾಮಗಾರಿ ತೀರಾ ಕಳಪೆಯಾಗಿತ್ತು.
ತಪಾಸಣೆ ವೇಳೆ ಸದರಿ ಕಟ್ಟಡದ ಬೀಮ್ ಬೆಂಡಾಗಿರುವುದು ಮತ್ತು ಕಟ್ಟಡದ ಇಟ್ಟಿಗೆ ಗೋಡೆಗಳು ಕೆಲವು ಕಡೆ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಒಟ್ಟಾರೆ ಕಾಮಗಾರಿ ತೀರಾ ಕಳಪೆ ಮಟ್ಟದಿಂದ ಕೂಡಿದೆ ಎನ್ನುವುದು ತಾ.ಪಂ. ಇಒ ವರದಿಯಲ್ಲಿದೆ.
ಕಾಮಗಾರಿ ಲೋಪ: ಜಿ.ಪಂ. ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಮತ್ತು ಡಿಡಿಪಿಐ ಜಂಟಿಯಾಗಿ ಹುಣಸನಹಳ್ಳಿ, ಕೊಂಡಾಪುರ, ಸಿಂಗರಾಜಿಪುರ ಗ್ರಾಮಗಳಲ್ಲಿ ಶಂಕರಪ್ಪ ಅವರು ನಡೆಸಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದದರು. ಆ ವೇಳೆ ಗುರುತರವಾದ ಲೋಪಗಳು ಕಂಡುಬಂದಿವೆ.
ಸದರಿ ಕಾಮಗಾರಿಗಳ ನಿರ್ವಹಣೆಯನ್ನು ಸರಿಯಾಗಿ ಮಾಡುವಂತೆ ಎಚ್ಚರಿಗೆ ನೀಡಲಾಗಿತ್ತು. ಹುಣಸನಹಳ್ಳಿಯ ಕಮ್ಯುನಿಟಿ ಹಾಲ್‌ಗೆ ಸರಿಯಾಗಿ ಕಾಂಕ್ರೀಟ್ ಹಾಕಿರಲಿಲ್ಲ. ಲಿಂಟಲ್ ಹಾಗೂ ಸಜ್ಜಾಗಳಲ್ಲಿ ಫಾರ್ಮ್ ವರ್ಕ್ ಸಮರ್ಪಕವಾಗಿರಲಿಲ್ಲ.
ಶಂಕರಪ್ಪ ನಿರ್ವಹಿಸಿದ ಇನ್ನಷ್ಟು ಕಾಂಕ್ರೀಟ್ ಕಾಮಗಾರಿಗಳನ್ನು ಖುದ್ದು ಜಂಟಿ ತಪಾಸಣೆ ಮಾಡಲಾಗಿತ್ತು. ಎರಡು ರಸ್ತೆಗಳಲ್ಲಿ ಹಾಕಬೇಕಿದ್ದ ಕಾಂಕ್ರೀಟ್ ಅನ್ನು ಒಂದು ರಸ್ತೆಗೆ ಮಾತ್ರ ಹಾಕಿ, ಅವುಗಳ ಅಳತೆಯನ್ನು ಸರಿಯಾಗಿ ನೀಡದಿರುವುದು ಪತ್ತೆಯಾಗಿದೆ. ಅಲ್ಲದೆ ಪ್ರಯಾರ್ ಅಪ್ರೂವಲ್ ಕೂಡ ಪಡೆದಿರಲಿಲ್ಲ.
ಗ್ರಾ.ಪಂ. ಅವ್ಯವಹಾರ: ಶಂಕರಪ್ಪ ಅವರು ನರೇಗಾ ಯೋಜನೆ ಕಾಮಗಾರಿಗಳ ನಿಯಮಗಳನ್ನು ಪಾಲಿಸದೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಗಿರುತ್ತಾರೆ. ಅವರ ವ್ಯಾಪ್ತಿ ಗ್ರಾ.ಪಂ. ಕಾಮಗಾರಿಗಳು ಕಳಪೆ ಮಟ್ಟದಲ್ಲಿರುತ್ತವೆ.
ಚನ್ನಪಟ್ಟಣ ತಾಲೂಕು ಬರಪೀಡಿತವೆಂದು ಘೋಷಿತವಾಗಿದ್ದರೂ ಅಲ್ಲಿನ ಸಾರ್ವಜನಿಕರಿಗೆ ಸ್ಪಂದಿಸದೆ ಇರುವುದು ಕಂಡುಬಂದಿದೆ. ಎನ್‌ಆರ್‌ಡಿಡಬ್ಲ್ಯೂಪಿ ಕಾಮಗಾರಿಗಳು ಸರಿಯಾಗಿ ಅನುಷ್ಠಾನವಾಗಿಲ್ಲವೆಂದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಗ್ರಾ.ಪಂ. ಹಿತಾಸಕ್ತಿಗೆ ಧಕ್ಕೆ ತರುವ ರೀತಿಯಲ್ಲಿ ಹಾಗೂ ಗ್ರಾ.ಪಂ. ಕಾಮಗಾರಿಗಳಲ್ಲಿ ಬೇಜವಾಬ್ದಾರಿತನ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯತೆ ತೋರಿರುವುದು ಕಂಡು ಬಂದಿವೆ. ಹೀಗಾಗಿ ಅಮಾನತುಪಡಿಸಿ, ವಿಚಾರಣೆಗೆ ಆದೇಶಿಸಲಾಗಿದೆ ಎಂದು ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ವಿವರಿಸಿದ್ದಾರೆ.