ಕೊಳ್ಳೆ ಹೊಡೆವ ಕಾಂಗ್ರೆಸ್ ಕಳ್ಳಬೆಕ್ಕು...
ದೊಡ್ಡಬಳ್ಳಾಪುರ: ಕಾಂಗ್ರೆಸ್ ಕಳ್ಳಬೆಕ್ಕು. ಇಂತಹ ಕಳ್ಳಬೆಕ್ಕನ್ನು ಹಾಲಿನ ರಕ್ಷಣೆಗೆ ಬಿಟ್ಟರೆ ಅದು ಯಾರಿಗೂ ಗೊತ್ತಾಗದಂತೆ ಹಾಲನ್ನು ಕುಡಿಯುತ್ತೆ. ಹಾಗೇ ಕಾಂಗ್ರೆಸ್ ಅಧಿಕಾರ ಸಿಕ್ಕರೆ ದೇಶವನ್ನು ಕೊಳ್ಳೆ ಹೊಡೆಯುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಧೈರ್ಯವಿಲ್ಲ ಎಂಬುದನ್ನು ಸಾಬೀತು ಮಾಡಿ ಕಾಂಗ್ರೆಸ್ ಈಗಾಗಲೇ 2014ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದೆ. ಹಾಗಾಗಿ 2019 ಚುನಾವಣೆಗೆ ಸಿದ್ಧತೆ ನಡೆಸುವುದು ಒಳಿತು. ದೇಶ ಕಾಂಗ್ರೆಸ್ ಆಡಳಿತದಲ್ಲಿ ತೀವ್ರ ಸಂಕಷ್ಟದಲ್ಲಿದೆ. ದೇಶದ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ತೊಲಗಿಸಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು.
ಸ್ವಾಭಿಮಾನಿ ಹೋರಾಟ: 2014ರ ಲೋಕಸಭಾ ಚುನಾವಣೆ ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟ ಎಂದ ಅವರು, 1947ರಲ್ಲಿ ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಈ ಬಾರಿಯ ಚುನಾವಣೆ ಸ್ವಾಭಿಮಾನಿ ಗೆಲವಿನ ಮಹಾಪರ್ವ ಎನಿಸಲಿದೆ. ಕಾಂಗ್ರೆಸ್ಸಿಗರು ಹತಾಶೆಯಿಂದ ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ ಜನ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ ಎಂದರು.
ಸುಗ್ರೀವಾಜ್ಞೆ ಗಿಮಿಕ್: ಕಳೆದ 10 ವರ್ಷದ ಕಾಂಗ್ರೆಸ್ ಸರ್ಕಾರ ಭಾರತ ಕಂಡ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. 4.5 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಬೆಲೆ ಏರಿಕೆ ಆಕಾಶದೆತ್ತರಕ್ಕೆ ಬೆಳೆದಿದೆ. ಆದರೆ ಇದನ್ನು ನಿಗ್ರಹಿಸಲು ರಾಹುಲ್ ಗಾಂಧಿಗೆ ಸಾಧ್ಯವಾಗಲಿಲ್ಲ. ಆದರೆ ಈಗ ದೇಶದ ಜನಕ್ಕೆ ಮಂಕುಬೂದಿ ಎರಚುವ ಕೆಲಸ ಮಾಡಲು ಹೊರಟಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾನೂನು ಬೇಕು ಎನ್ನುತ್ತಿರುವ ರಾಹುಲ್, ಈ ಬಗ್ಗೆ ಸುಗ್ರೀವಾಜ್ಞೆ ತರಲು ಹುನ್ನಾರ ನಡೆಸಿದ್ದಾರೆ. ಈಗಾಗಲೇ ಹಾಲಿ ಸರ್ಕಾರದ ಕೊನೆಯ ಅಧಿವೇಶನ ಮುಗಿದಿದೆ. ಯಾವ ಮಸೂದೆಗಳನ್ನೂ ಕಾನೂನು ಮಾಡಲು ಈಗ ಅವಕಾಶ ಇಲ್ಲ. ಆದಾಗ್ಯೂ ಈ ಸುಗ್ರೀವಾಜ್ಞೆ ತರುವ ಕೆಲಸ ಮಾಡಿದರೆ ನೇರವಾಗಿ ರಾಷ್ಟ್ರಪತಿಗಳ ಬಳಿಗೆ ನಿಯೋಗ ಕೊಂಡೊಯ್ಯುವ ಮೂಲಕ ಅಸಾಂವಿಧಾನಿಕ ಹುನ್ನಾರಗಳನ್ನು ಖಂಡಿಸಲಾಗುವುದು ಎಂದರು.
ಕೋಮು ಸೌಹಾರ್ದ ಕದಡಿಲ್ಲ: ಬಿಜೆಪಿ ದೇಶದಲ್ಲಿ ಯಾವತ್ತೂ ಕೋಮು ಸೌಹಾರ್ದತೆಗೆ ಧಕ್ಕೆ ತಂದಿಲ್ಲ. ಬದಲಿಗೆ ಸಾಮಾಜಿಕ ಸೌಹಾರ್ದತೆಯನ್ನೂ ಬೆಳೆಸುವ ಮಹತ್ವದ ಕೆಲಸ ಮಾಡಿದೆ. ಬಿಜೆಪಿ ಮಾತ್ರವೇ ಸುಭದ್ರ ಆಡಳಿತ ನೀಡಬಹುದು ಎಂದು ದೇಶ-ವಿದೇಶದ ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಡೆದು ಆಳುವ ನೀತಿಯ ಮೂಲಕವೇ ದೇಶವನ್ನು ದುಸ್ಥಿತಿಗೆ ತಳ್ಳಿದೆ. ಅದು ಜಾತ್ಯತೀತತೆಯ ಹೆಸರಿನಲ್ಲಿ ಜಾತ್ಯತೀತ ಶಕ್ತಿಗಳನ್ನು ಒಡೆದು ಸ್ವಾರ್ಥದ ಲಾಭ ಮಾಡಿಕೊಂಡಿದೆ. ಆದರೆ ಬಿಜೆಪಿ ಒಗ್ಗೂಡಿಸಿಕೊಂಡು ದೇಶ ಆಳುವ ಕೆಲ ಮಾಡಿದೆ. ಕಾಂಗ್ರೆಸ್ದು ವಿಕೃತ ಜಾತ್ಯತೀತವಾದರೆ ಬಿಜೆಪಿಯದು ಸಕಾರಾತ್ಮಕ ಜಾತ್ಯತೀತವಾದ. ದೇಶದ ರಾಜಾಸ್ಥಾನ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಪರಿಣಾಮ ದೇಶದ ಜಿಡಿಪಿ ದರ 5ರ ಆಸುಪಾಸಿನಲ್ಲಿದೆ. ಬಿಜೆಪಿ ಇಲ್ಲದಿದ್ದರೆ ಅದು 3ಕ್ಕಿಂತ ಕೆಳಗೆ ಕುಸಿಯುತ್ತಿತ್ತು ಎಂದರು.
ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, ಮಾಜಿ ಸಚಿವ ಸಿ.ಟಿ.ರವಿ, ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್, ಡಿ.ಎಸ್.ವೀರಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ನಾಗರಾಜ್, ಜಿ.ಚಂದ್ರಣ್ಣ, ಮುಖಂಡ ಕೆ.ಎಂ.ಹನುಮಂತರಾಯಪ್ಪ ಮತ್ತಿತರರಿದ್ದರು.