ಜಿಲ್ಲಾ ಕೇಂದ್ರಕ್ಕಾಗಿ ಜಯ ಭಾರತ ರಕ್ಷಣಾ ವೇದಿಕೆ ಧರಣಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ಜಯ ಭಾರತ್ ರಕ್ಷಣಾ ವೇದಿಕೆ ಸಾಥ್ ನೀಡಿದೆ. ಬುಧವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಅಡಿಯಲ್ಲಿ ನಡೆದ ಹೋರಾಟದಲ್ಲಿ ನೇತೃತ್ವ ವಹಿಸಿದ್ದ ಜಯ ಭಾರತ ರಕ್ಷಣಾ ವೇದಿಕೆಯ ಹತ್ತಾರು ಕಾರ್ಯಕರ್ತರು ಸರ್ಕಾರ ಈ ಕೂಡಲೇ ದೊಡ್ಡಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಜಿಲ್ಲಾ ಕೇಂದ್ರದ ಘೋಷಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೊಣೆಯಾಧಾರಿತವಾಗಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಇಲ್ಲಿನ ಜನರ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿದರೆ ಹೋರಾಟ ತೀವ್ರಗೊಳಿಸಬೇಕಾದೀತು. ಈಗಾಗಲೇ ಗ್ರಾಮಾಂತರ ಮಟ್ಟಕ್ಕೂ ಹೋರಾಟ ವ್ಯಾಪಿಸಿದೆ. ಎಲ್ಲ ವರ್ಗಗಳ ಜನ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವೂ ಹೋರಾಟಕ್ಕೆ ಲಭ್ಯವಾಗಿದ್ದು, ಎಲ್ಲ ಅರ್ಹತೆಗಳನ್ನು ಹೊಂದಿರುವ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿದೆ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಜಯಭಾರತ ರಕ್ಷಣಾ ವೇದಿಕೆನ ವಿವಿಧ ಘಟಕಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು. ಧರಣಿಗೂ ಮುನ್ನ ಪ್ರತಿಭಟನಾ ಮೆರವಣಿಗೆ ನಡೆಯಿತು.