ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರರ ಪರ ಯೋಜನೆ
ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ರೈತರು ಮತ್ತು ನೇಕಾರರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ಸಿಂಗ್ ಸ್ಥಳೀಯ ಮತದಾರರ ಓಲೈಕೆಗೆ ಮುಂದಾದರು. ಇಲ್ಲಿನ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರದ ಸ್ಥಳೀಯ ನೇಕಾರಿಕೆ ಮತ್ತು ಕೃಷಿಯ ಕುರಿತು ಪದೇ ಪದೇ ಪ್ರಸ್ತಾಪಿಸಿದರು. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಬೆಳೆ ವಿಮೆ ಜಾರಿಗೆ ತರಲಾಗುವುದು. ರೈತರ ಹಿಡುವಳಿ ಆದಾಯ ಅಂದಾಜು ಮಾಡಿ ವಿಮೆ ಕೊಡಲಾಗುವುದು. ಬೆಳೆ ಹಾಳಾದರೆ, ಬೆಲೆ ಸಿಗದಿದ್ದರೆ ಸರ್ಕಾರವೇ ವಿಮಾ ಹಣ ಕೊಡಲಿದೆ ಎಂದರು. ದೊಡ್ಡಬಳ್ಳಾಪುರ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಗುರುತಿಸಿಕೊಂಡಿದೆ. ಇಲ್ಲಿನ ನೇಕಾರಿಕೆ ಈಗ ಸಂಕಷ್ಟದಲ್ಲಿದೆ. ಅದೇ ರೀತಿ ದೇಶದಲ್ಲಿ ನೇಕಾರರಿಗೆ ವಿದ್ಯುತ್ ಅಭಾವ ನೀಗಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮಗಳ ಜಾರಿ, ಸಬ್ಸಿಡಿ ದರದಲ್ಲಿ ಸಾಲ, ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ, ಸಹಕಾರ ಸಂಸ್ಥೆಗಳ ಮೂಲಕ ವಿದೇಶಗಳಿಗೆ ನೇರ ಜವಳಿ ರಫ್ತು ಅವಕಾಶ ನೀಡುವ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು ಎಂದು ಅನಧಿಕೃತ ಪ್ರಣಾಳಿಕೆ ಮುಂದಿಟ್ಟರು.
ಯಡಿಯೂರಪ್ಪ ನೇತೃತ್ವ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 19 ಸ್ಥಾನ ಗಳಿಸಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ತಪ್ಪುಗಳಿಂದ ಪಾಠ ಕಲಿಯುವಂತಾಯಿತು. ದೂರವಾಗಿದ್ದ ಯಡಿಯೂರಪ್ಪ ಈಗ ಮತ್ತೆ ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲೆಡೆ ಭ್ರಷ್ಚಾಚಾರ: ಕಾಂಗ್ರೆಸ್ದು ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ. ನೆಲ-ಜಲ ಮತ್ತು ಆಕಾಶ ಸೇರಿದಂತೆ ಭ್ರಷ್ಟಾಚಾರ ಇಡೀ ಬ್ರಹ್ಮಾಂಡವನ್ನೇ ಆವರಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಡತನ, ಆಂತರಿಕ ಭದ್ರತೆ, ಗಡಿ ಸಮಸ್ಯೆ ಎಲ್ಲವೂ ಬೆಳೆದಿವೆ. ವಾಜಪೇಯಿ ಸರ್ಕಾರದ 6 ವರ್ಷದ ಸಾಧನೆ ಕಾಂಗ್ರೆಸ್ನ 60 ವರ್ಷದ ಸಾಧನೆಗೂ ಮೀರಿದ್ದು ಎಂದ ರಾಜನಾಥ್, ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮೋದಿ ಪ್ರಧಾನಿಯಾಗ್ತಾರೆ. ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎಂಬುದನ್ನು ಜನರಿಗೆ ಹೇಳ ಬಯಸುತ್ತೇನೆ. ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡುವ ಸರ್ಕಾರ ಅಲ್ಲ. ಅದು ದೇಶವನ್ನು ಮಾರಾಟ ಮಾಡುವ ಸರ್ಕಾರ. ಕರ್ನಾಟಕದಲ್ಲಿ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಸರ್ಕಾರ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ ಕೀರ್ತಿ ಹೊಂದಿದೆ ಎಂದರು.
ಕನ್ನಡ ನುಡಿ: ನರೇಂದ್ರ ಮೋದಿ ಆಡಳಿತ ಪರ್ವಕ್ಕೆ ದೊಡ್ಡಬಳ್ಳಾಪುರದ ಸಮಾವೇಶ ದಿಕ್ಸೂಚಿಯಾಗಲಿ. ಕರ್ನಾಟಕದಲ್ಲಿ ಈ ಚುನಾವಣೆಯ ಮೊದಲ ಬಹಿರಂಗ ಸಭೆ ಇದಾಗಿದೆ. ದೊಡ್ಡಬಳ್ಳಾಪುರದ ಎಲ್ಲ ನನ್ನ ಪ್ರೀತಿಯ ಬಂಧು-ಭಗಿನಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.