ವಲಸೆ ಹಕ್ಕಿ ಮೊಯ್ಲಿ ಗಂಟು ಮೂಟೆ ಕಟ್ಟಲಿ'
ದೊಡ್ಡಬಳ್ಳಾಪುರ: ವಲಸೆ ಹಕ್ಕಿ ವೀರಪ್ಪ ಮೊಯ್ಲಿ ಮಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದು ಕುಳಿತಿದೆ. ಈ ವಲಸೆ ಹಕ್ಕಿ ಬರೀ ಸ್ವಾರ್ಥದ ಗಂಟುಮೂಟೆ ಕಟ್ಟಿಕೊಂಡಿದೆ. ಈಗ ವಲಸೆ ಹಕ್ಕಿ ಗಂಟು ಮೂಟೆ ಕಟ್ಟಿ ಎಂದು ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ಮುಖಂಡ ಅನಂತಕುಮಾರ್ ಹೇಳಿದರು.
ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ವೀರಪ್ಪ ಮೊಯ್ಲಿ ಎರಡೂ ಕೂಡ ಬೆಲೆ ಏರಿಕೆಯ ಪ್ರತಿರೂಪಗಳು. ಪ್ರತಿ ವಾರಕ್ಕೊಮ್ಮೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಪಟ್ಟಿ ಬದಲಾಯಿಸಿದ ಕುಖ್ಯಾತಿ ಅವರದ್ದು. ಇಂತಹ ಮೊಯ್ಲಿ ನಮಗೆ ಬೇಡ. ಮೊಯ್ಲಿಗೆ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಜನರ ಸಮಸ್ಯೆಗಳು ಗೊತ್ತಿಲ್ಲ. ಇಲ್ಲಿನ ರೈತ, ನೇಕಾರ, ನಾಡಿನ ಸಮಸ್ಯೆಗಳ ಬಗ್ಗೆ ನಿಗಾ ಇಲ್ಲ. ಸ್ಥಳೀಯ ಪ್ರದೇಶಾಭಿವೃದ್ಧಿಗೆ ಮೊಯ್ಲಿ ಕೊಡುಗೆ ಶೂನ್ಯ ಎಂದರು. ಬೆಂಗಳೂರು ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಕೊಡುಗೆ. ಬಿಜೆಪಿ ಸಾಧನೆಯನ್ನು ಮೊಯ್ಲಿ ತಮ್ಮದೆನ್ನುತ್ತಿದ್ದಾರೆ. ಮೋದಿ ಪ್ರಧಾನಿಯಾದರೆ ವಾಜಪೇಯಿ ಕಾಲದಲ್ಲಿದ್ದಂತೆ ಬೆಲೆ ಏರಿಕೆ ನಿಯಂತ್ರಣ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ, ಪಾಕಿಸ್ತಾನ-ಚೀನಾ-ಬಾಂಗ್ಲಾದೇಶ ಗಡಿ ತಂಟೆಗೆ ತಕ್ಕಶಾಸ್ತಿ ಮಾಡುವ ಮೂರು ಮಹತ್ವದ ಸಂಕಲ್ಪಗಳನ್ನು ಬಿಜೆಪಿ ಹೊಂದಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವೀರಪ್ಪ ಮೊಯ್ಲಿ ವಿರುದ್ಧ ಟೀಕೆಗೆ ತಮ್ಮ ಭಾಷಣವನ್ನು ಮೀಸಲಿಟ್ಟರು. ಕ್ಷೇತ್ರದಲ್ಲಿ ನೂರಾರು ಬ್ಯಾನರ್‌ಗಳನ್ನು ಹಾಕಿಕೊಂಡು ದೊಡ್ಡ ಸಾಧಕರಂತೆ ಫೋಸು ಕೊಡುತ್ತಿದ್ದಾರೆ. ಎತ್ತಿನಹೊಳೆ ಮೂಲಕ ತಮ್ಮ ಡೋಂಗಿತನ ಪ್ರದರ್ಶಿಸುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಸಕಲೇಶಪುರದಲ್ಲಿ ಎತ್ತಿನಹೊಳೆ ಶಂಕುಸ್ಥಾಪನೆ ಮಾಡಲಿ. ಅದನ್ನು ಬಿಟ್ಟು ಮುದ್ದೇನಹಳ್ಳಿಯಲ್ಲಿ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸುವ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಯೋಜನೆಗೆ ದಕ್ಷಿಣ ಕನ್ನಡದಲ್ಲಿ ತೀವ್ರ ವಿರೋಧವಿದೆ. ಆದರೆ ನಾನು ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದೇನೆ. ವರ್ಷಕ್ಕೆ 2500 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದರಲ್ಲಿ 24 ಟಿಎಂಸಿ ನೀರನ್ನು ಈ ಭಾಗಕ್ಕೆ ಸ್ವಾಭಾವಿಕ ಅರಣ್ಯ-ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ತರಬಹುದು. ಆ ಕೆಲಸವನ್ನು ಮೊಯ್ಲಿ ಮಾಡಿದರೆ ದೇವರು ಮೆಚ್ಚುತ್ತಾನೆ. ಆದ್ರೆ ಬರೀ ಸುಳ್ಳು ಹೇಳಿದ್ರೆ ಯಾರು ಕೇಳ್ತಾರೆ ಎಂದು ಪ್ರಶ್ನಿಸಿದರು.
ನಿರಶನಕ್ಕೆ ಸಿದ್ಧ: ಮುಂದಿನ ದಿನಗಳಲ್ಲಿ ಮೋದಿ ಮೂಲಕ ಎತ್ತಿನಹೊಳೆ ಅನುಷ್ಠಾನ ಆಗುತ್ತೆ. ರಾಜಕಾರಣ ಏನೇ ಇರಲಿ, ಒಂದು ವೇಳೆ ಎತ್ತಿನಹೊಳೆ ಜಾರಿಗೆ ಬರದಿದ್ದರೆ ಈ ಭಾಗದ ಜನರೊಂದಿಗೆ ಬೀದಿಗಿಳಿದು ನಿರಶನ ಮಾಡಲು ಈ ಸದಾನಂದಗೌಡ ಸದಾ ಸಿದ್ಧ ಎಂದರು. ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಕಿದ್ದ ಶಿಲಾನ್ಯಾಸದ ಕಲ್ಲುಗಳ ಮೇಲೆ ಹುಲ್ಲು ಬೆಳೆದಿದೆ. ಆದರೆ ಯೋಜನೆಗಳು ಸಾಕಾರವಾಗಿಲ್ಲ. ಇಂತಹ ಶಾಪಗ್ರಸ್ತರು ಕ್ಷೇತ್ರಕ್ಕೆ ಏನು ತಾನೆ ಮಾಡಲು ಸಾಧ್ಯ ಈ ಶಾಪ ವಿಮೋಚನೆಗೆ ಕಾಲ ಸನ್ನಿಹಿತವಾಗಿದೆ ಎಂದರು.