ಹಾಡಹಗಲೇ ವ್ಯಕ್ತಿ ಕೊಚ್ಚಿ ಕೊಲೆ
ಆನೇಕಲ್ಲು: ಆನೇಕಲ್ ನ್ಯಾಯಾಲಯಕ್ಕೆ ಬಂದು ನಂತರ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಹಿಂಬಾಲಿಸಿ ಕಾರಿನಿಂದ ಡಿಕ್ಕಿ ಹೊಡೆದು ಬೀಳಿಸಿ ನಂತರ ಕಾರಿನಲ್ಲಿದ್ದ ನಾಲ್ವರು ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಘಟನೆ ಆನೇಕಲ್ ಠಾಣಾ ವ್ಚಾಪ್ತಿಯ ಆವಡದೇನಹಳ್ಳಿ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಘಟನೆ ನಂತರ ತಾವು ಬಂದ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಮಹೇಶ ಅಲಿಯಾಸ್ ಡೈರಿ ಮಹೇಶ (33) ಕೊಲೆಯಾದವನು. ಈತನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿನೋದ್ ಮತ್ತು ಶಂಕರ್ ತೀವ್ರ ಗಾಯಗಳಿಂದ ಆನೇಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ನಿಖರವಾದ ಕಾರಣ - ವ್ಯಕ್ತಿಗಳು ಯಾರೆಂದು ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಕೆಲವು ಸುಳಿವು ದೊರೆತಿದ್ದು ವಿನೋದ್ ಹಾಗೂ ಶಂಕರ್ ಚೇತರಿಸಿಕೊಂಡ ನಂತರ ತನಿಖೆ ಮುಂದುವರಿಸಲಾಗುವುದು ಎಂದು ಪಿಎಸ್ಸೈ ರಾಘವೇಂದ್ರ ಬೈಂದೂರು ತಿಳಿಸಿದ್ದಾರೆ.
ಮಹೇಶ್ ತಾಲೂಕಿನ ಅತ್ತಿಬೆಲೆ, ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಆನೇಕಲ್ ಪೊಲೀಸರು ಗಾಯಾಳುಗಳನ್ನು ವಾಹನದಲ್ಲಿ ಕೂಡಲೇ ಆನೇಕಲ್ ಆಸ್ಪತ್ರೆಗೆ ದಾಖಲಿಸಿದರು.
ರಸ್ತೆಯಲ್ಲಿ ಹಾಡ ಹಗಲೇ ಕೊಚ್ಚಿ ಕೊಂದ ವಿಷಯ ತಿಳಿಯುತ್ತಲೇ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಆನೇಕಲ್ ಠಾಣೆಗೆ ಮೊಬೈಲ್ ಕರೆ ಮಾಡಿ ತಿಳಿಸಿದರು.