ಆನೇಕಲ್‌ನಲ್ಲಿ.....
ಆನೇಕಲ್ಲು: ಆನೇಕಲ್ ಪಟ್ಟಣದ ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯ, ಶ್ರೀ ಭ್ರಮರಾಂಬ ಸಹಿತ ಮಲ್ಲಿಕಾರ್ಜುನೇಶ್ವರ, ಗಂಗಾಧರೇಶ್ವರ, ಬಸವೇಶ್ವರ, ಕಾಶೀ ವಿಶ್ವನಾಥ, ನಗರೇಶ್ವರ, ರಾಮಲಿಂಗೇಶ್ವರ ಹಾಗೂ ಚಂದ್ರಚೂಡೇಶ್ವರ ಸ್ವಾಮಿ, ರಾಮ ಪಂಚಾಯತನ, ಕಾಳಿಕಾಂಬ ದೇಗುಲ ಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ತೀರ್ಥ ಪ್ರಸಾದಗಳ ವಿನಿಯೋಗ ನಡೆಯಿತು. ಬೆಳಗ್ಗಿನಿಂದಲೇ ದೇಗುಲಗಳಲ್ಲಿ ರುದ್ರಾಭಿಷೇಕ, ನಮಕ, ಚಮಕ ವಾಚನ ನಡೆದರೇ ಕೆಲವೆಡೇ ಬಿಲ್ವಾರ್ಚನೆ, ವಿಭೂತಿ ಸೇವೆ ನಡೆಯಿತು. ಭಕ್ತಾದಿಗಳು ಸಾಂಪ್ರದಾಯಿಕ ಪಂಚೆ ಅಂಗಿ ಧರಿಸಿದ್ದರೇ ಮಹಿಳೆಯರು ಶುಭ್ರವಾದ ರೇಷ್ಮೆ ಸೀರೆಯುಟ್ಟು ಉಮಾ ಮಹೇಶ್ವರರಂತೆ ಕಂಗೊಳಿಸುತ್ತಿದ್ದರು. ತಾಲೂಕಿನ ಅತ್ತಿಬೆಲೆಯ ಕೋಟೆ ನಂಜುಂಡೇಶ್ವರ ಸ್ವಾಮಿ, ಬಿದರಗುಪ್ಪೆಯ ರಥ ಗಾಯತ್ರಿ ಸಮೇತ ಶ್ರೀ ನಂಜುಂಡೇಶ್ವರ, ಸರ್ಜಾಪುರದ ಬಿಲ್ಲೇಶ್ವರಸ್ವಾಮಿ ಕಹಾಗೂ ಚಂದ್ರಮೌಳೇಶ್ವರ ಸ್ವಾಮಿ, ಸೋಮೇಶ್ವರ ಸ್ವಾಮಿ, ದೊಮ್ಮಸಂದ್ರದಲ್ಲಿ ಕಾಶಿ ವಿಶ್ವನಾಥ, ನೆರಳೂರಿನ ಕಾಶೀ ವಿಶ್ವೇಶ್ವರ ಸ್ವಾಮಿ, ಕಸಬಾ ಮಲ್ಲೇಶ್ವರ ಸ್ವಾಮಿ, ದೇವರಬೆಟ್ಟ ಬೃಹತೀಶ್ವರಸ್ವಾಮಿ ಸೇರಿದಂತೆ ತಾಲೂಕಿನ ನೂರಾರು ದೇಗುಲಗಳಲ್ಲಿ ವಿಜೃಂಭಣೆಯಿಂದ ಅಲಂಕಾರ ಮತ್ತು ಪೂಜೆ ನಡೆಯಿತು.
ಶನೈಶ್ಚರನಿಗೆ ಬೆಳ್ಳಿ ರಥೋತ್ಸವ
ಆನೇಕಲ್ಲು: ದಾವಣಗೆರೆ ಜಿಲ್ಲೆಯ ಹರಿಹರದಿಂದ ಬರಮಾಡಿಕೊಂಡ 40 ಅಡಿ ಉದ್ದ 11 ಅಡಿ ಎತ್ತರದ ರಜತ ರಥದಲ್ಲಿ ಆನೇಕಲ್ಲಿನ ಪ್ರಖ್ಯಾತ ಶ್ರೀ ಶನೈಶ್ಚರ ಸ್ವಾಮಿ ಉತ್ಸವ ಮೂರ್ತಿಯನ್ನು ವೈಭವದಿಂದ ಪುರ ಮೆರವಣಿಗೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಬಂದ ರಜತ ರಥ ಭಕ್ತಾದಿಗಳ ಆಕರ್ಷಣೆಯಾಗಿತ್ತು. ಬೆಳ್ಳಿ ಕವಚದಿಂದ ನಿರ್ಮಾಣ ಮಾಡಿರುವ 7 ಕುದುರೆಗಳ ಅಲಂಕೃತ ರಥ ಪುಷ್ಪಗಳಿಂದ ಅಲಂಕೃತವಾದ ಬೆಳ್ಳಿ ಮಂಟಪ ಹಂಸತೂಲಿಕಾ ವಾಹನದಂತೆ ಕಂಗೊಳಿಸುತ್ತಿತ್ತು. ಭಕ್ತಾದಿಗಳು ಮನೆ ಮುಂದೆ ನೀರು ಚೆಲ್ಲಿ ರಂಗೋಲಿ ಹಾಕಿ ಮಹಾತ್ಮನನ್ನು ಬರಮಾಡಿಕೊಂಡು ಪೂಜೆಗೆ ನೀಡುತ್ತಿರುವುದನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ವೀಕ್ಷಿಸಿದರು.