ಆಹಾರ ಜಾಗೃತಿಗಾಗಿ ಸೈಕಲ್ ಜಾಥಾ
ದೊಡ್ಡಬಳ್ಳಾಪುರ: ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ಟ್ರಸ್ಟ್ ಮತ್ತು ದೊಡ್ಡಬಳ್ಳಾಪುರ ನಾಗದಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಚಿತ್ರದುರ್ಗಕ್ಕೆ 6ನೇ ಜನಜಾಗೃತಿ ಸೈಕಲ್ ಜಾಥಾ ನಡೆಯಿತು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾಲೇಜು ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಆರೋಗ್ಯದ ಹಿತಾಸಕ್ತಿಯನ್ನು ಬೆಳೆಸುವ ಮತ್ತು ಮಿತಾಹಾರ ಮತ್ತು ಶುದ್ಧ ಆಹಾರ ಸೇವನೆ ಬಗ್ಗೆ ಜನರನ್ನು ಎಚ್ಚರಿಸುವ ಮಹತ್ವದ ಆಶಯವನ್ನು ಈ ಸೈಕಲ್ ಜಾಥಾ ಹೊಂದಿದೆ.
ಆರೋಗ್ಯಕ್ಕಾಗಿ ಆಹಾರ ಮತ್ತು ಜಂಕ್ಫುಡ್ ವಿರೋಧಿ ಚಿಂತನೆಗಳನ್ನು ಸಾಮಾನ್ಯ ಜನರಲ್ಲಿ ಮೂಡಿಸುವ ಪ್ರಯತ್ನಗಳನ್ನು ಜಾಥಾದಲ್ಲಿ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ದೊಡ್ಡಬಳ್ಳಾಪುರದಿಂದ ಆರಂಭವಾದ ಜಾಥಾ ಮಧುಗಿರಿ, ಸಿರಾ, ಹಿರಿಯೂರು ಮಾರ್ಗವಾಗಿ ಚಿತ್ರದುರ್ಗ ತಲುಪಿ ದೊಡ್ಡಬಳ್ಳಾಪುರಕ್ಕೆ ಹಿಂತಿರುಗಿತು. ಮಾರ್ಗ ಮಧ್ಯೆ ಸಿಕ್ಕ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಥಾದ ಮೂಲ ಉದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಸಂಬಂಧಪಟ್ಟ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು. ತಾಲೂಕು ಬಳಕೆದಾರರ ಸಂಘದ ಸುಂ.ಸು.ಬದ್ರೀನಾಥ್ ಮತ್ತು ನಾಗದಳದ ಸಿ. ನಟರಾಜ್ ಸೈಕಲ್ ಜಾಥಾ ಕೈಗೊಂಡಿದ್ದರು.