ಈ ಬಾರಿ ತೃತೀಯ ರಂಗದ ಬಲವರ್ಧನೆ: ಎಚ್.ಡಿ. ದೇವೇಗೌಡ ವಿಶ್ವಾಸ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಆಂಜನೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ರಮೇಶ್‌ಬಾಬು ನೀಡಿರುವ ಆದೇಶ ಪ್ರತಿಯನ್ನು ಆಂಜನೇಗೌಡ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ರಚನೆಯಾಗುವ ಸರ್ಕಾರದಲ್ಲಿ ಜೆಡಿಎಸ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ. ತೃತೀಯ ರಂಗ ಈ ಬಾರಿಯ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸಮಾನ ಅಂತರದಲ್ಲಿಟ್ಟು ನೋಡುವ ಸಂದರ್ಭ ದೇಶದೆಲ್ಲೆಡೆ ಗೋಚರಿಸುತ್ತಿದೆ. ಮತದಾರರು ಎರಡೂ ಶಕ್ತಿಗಳನ್ನು ತಿರಸ್ಕರಿಸಿ ತೃತೀಯ ಶಕ್ತಿಯನ್ನು ಬೆಂಬಲಿಸಲಿವೆ ಎಂದರು. ಪಕ್ಷದ ಕಾರ್ಯಕರ್ತರು ತಳಹಂತದಿಂದ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು. ಎಲ್ಲ ವಿಭಾಗಗಳನ್ನೂ ಸಶಕ್ತವಾಗಿ ಕಟ್ಟಬೇಕು. ಜವಾಬ್ದಾರಿಗಳನ್ನು ನಿರ್ವಹಿಸುವ ಜನ ಎಲ್ಲ ಕಾರ್ಯಕರ್ತರನ್ನು ಒಟ್ಟಿಗೆ ಕರೆದೊಯ್ಯುವ ಹೊಣೆಗಾರಿಕೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.