ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 4.5ಲಕ್ಷ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಫೆ.27
ದೊಡ್ಡಬಳ್ಳಾಪುರದಲ್ಲಿ ಮಾ.3 ಮತ್ತು 4 ರಂದು ನಡೆಯುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ವತಿಯಿಂದ ಕಸಾಪ ಮೂಲಕ 4.5 ಲಕ್ಷ ಹಣ ಬಿಡುಗಡೆಯಾಗಿದೆ.
ಬಿಡುಗಡೆಯಾಗಿರುವ ಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ-ಕೋಶಾಧ್ಯಕ್ಷರ ಸಮ್ಮುಖದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಡಿ.ಶ್ರೀಕಾಂತ್ ಅವರಿಗೆ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ವಿವರಣೆ ನೀಡಿದ ಜಿಲ್ಲಾ ಕಸಾಪ ಕೋಶಾಧ್ಯಕ್ಷ ನ.ಮಹದೇವ್ ಸರ್ಕಾರ ಮತ್ತು ಕಸಾಪ ನಿಯಮಾವಳಿಯಂತೆ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಅಧ್ಯಕ್ಷರಿಗೆ ಆಹ್ವಾನ: ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಎ.ಓ. ಆವಲಮೂರ್ತಿ ಅವರಿಗೆ ಸಮ್ಮೇಳನದ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡುವ ಮೂಲಕ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಆಹ್ವಾನ ನೀಡಲಾಯಿತು. ಆಹ್ವಾನ ಸ್ವೀಕರಿಸಿದ ಆವಲಮೂರ್ತಿ ಮಾತನಾಡಿ, ವಿಜ್ಞಾನ ಲೇಖಕರೊಬ್ಬರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿರುವುದು ಗಣನೀಯ. ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಜ್ಞಾನ ಸಾಹಿತ್ಯದ ಬೆಳವಣಿಗೆ ಆಶಾದಾಯಕವಾಗಿದೆ. ವೈಜ್ಞಾನಿಕ ಚಿಂತನೆಗಳನ್ನು ಜನರಲ್ಲಿ ಮೂಡಿಸಲು ಮತ್ತು ಸಮಕಾಲೀನ ಸಂದರ್ಭದಲ್ಲಿ ಹಲವು ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಬಗೆಯ ವೇದಿಕೆಗಳು ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ತಾ.ಕಸಾಪ ಅಧ್ಯಕ್ಷ ಡಿ.ಶ್ರೀಕಾಂತ, ಜಿಲ್ಲಾ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ತಾಲೂಕು ಕಾರ್ಯದರ್ಶಿ ಎಚ್.ಎನ್.ಪ್ರಕಾಶ್, ಜ್ಯೋತಿಕುಮಾರ್, ತಾ.ಕೋಶಾಧ್ಯಕ್ಷ ಎಂ.ವಿ.ರಾಜಕುಮಾರ್ ಮತ್ತಿತರರು ಹಾಜರಿದ್ದರು.