ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಬು ಜಗಜೀವನರಾಂ ಪುತ್ಥಳಿ ಅನಾವರಣಕ್ಕೆ ವೇದಿಕೆ ಸಜ್ಜು

Rashmi Kasaragodu
Updated On : 28 Feb 2014, 1:41 am

ದೊಡ್ಡಬಳ್ಳಾಪುರ: ದೇಶದ ಮೊದಲ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿಯನ್ನು ನಗರಸಭೆ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ಪುರಭವನದ ಮುಂದೆ ನಿರ್ಮಿಸಲಾಗಿದ್ದು, ಮಾ.2ರ ಭಾನುವಾರ ಉದ್ಘಾಟನಾ ಕಾರ್ಯಕ್ರಮ ಮತ್ತು ಜಗಜೀವನರಾಂ ಭವನದ ಶಂಕುಸ್ಥಾಪನೆ ನಡೆಯಲಿದೆ ಎಂದು ದಲಿತ ವಿಮೋಚನಾ ಸೇನೆ ರಾಜ್ಯಾಧ್ಯಕ್ಷ ಮಾ.ಮುನಿರಾಜು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಗಣನೀಯ ಸಂಖ್ಯೆಯಲ್ಲಿ ಮಾದಿಗ ಜನಾಂಗದ ಜನರಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ಕಾಲೋನಿಗಳಿವೆ. ಆದರೆ ಅವರಿಗೆ ಸಾಮಾನ್ಯವಾಗಿ ಸಿಗಬೇಕಿದ್ದ ನೆಲೆ-ಬೆಲೆ ಸಿಕ್ಕಿಲ್ಲ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಗಣನೀಯ ಪ್ರಗತಿ ಆಗಿಲ್ಲ. ಈ ಹಿನ್ನಲೆಯಲ್ಲಿ ಮಾದಾರ ಚನ್ನಯ್ಯ ಮಹಾಸಭಾದ ನೇತೃತ್ವದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ತಾಲೂಕಿನಲ್ಲಿ ಈಗಾಗಲೇ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ 13 ವರ್ಷಗಳೇ ಕಳೆದಿವೆ. ಆದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಚಳವಳಿಯ ವೈಫಲ್ಯ ಕಾರಣ. ಕೆಲ ತಾಂತ್ರಿಕ ದೋಷಗಳಿಂದ ಕಾಮಗಾರಿ ಕುಂಠಿತವಾಗಿದೆ. ಈಗ ಗುತ್ತಿಗೆದಾರರನ್ನು ಬದಲಿಸಿ ಕಾಮಗಾರಿ ಮುಂದುವರೆಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಹಂತದಲ್ಲಿ ಅದು ಚರ್ಚೆಯಲ್ಲಿದೆ. ಮರುಟೆಂಡರ್ ಕರೆದು ಕಾಮಗಾರಿಯನ್ನು ಮುಂದುವರೆಸಬೇಕಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಭವನ ಮತ್ತು ಜಗಜೀವನರಾಂ ಭವನ ಕಾಮಗಾರಿಗಳು ಒಟ್ಟೊಟ್ಟಿಗೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.
ಜಗಜೀವನರಾಂ ಪುತ್ಥಳಿಯನ್ನು ಸ್ಪೀಕರ್ ಮೀರಾಕುಮಾರ್ ಅವರಿಂದ ಅನಾವರಣಗೊಳಿಸುವ ಪ್ರಯತ್ನಗಳು ನಡೆದವು. ಪರಿಣಾಮವಾಗಿ ಒಂದಷ್ಟು ದಿನ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಚುನಾವಣೆ ಸಂದರ್ಭದಲ್ಲಿ ಪುತ್ಥಳಿ ಉದ್ಘಾಟನೆಯಾಗುತ್ತಿರುವುದಕ್ಕೂ, ರಾಜಕಾರಣದ ಸ್ವಾರ್ಥಗಳಿಗೂ ಸಂಬಂಧವಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ 1 ಎಕರೆ 10 ಗುಂಟೆ ಜಾಗವನ್ನು ಜಗಜೀವನರಾಂ ಭವನಕ್ಕೆ ನೀಡಲಾಗಿದ್ದು, ಸರ್ಕಾರ 5 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಿದೆ. ಇದಕ್ಕೆ ಈಗಾಗಲೇ 1 ಕೋಟಿ ಮುಂಗಡ ಹಣ ಕೂಡ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.
ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಮೋಟಮ್ಮ, ಜಿಲ್ಲಾ ಮಂತ್ರಿ ಕೃಷ್ಣಬೈರೇಗೌಡ, ಸಚಿವ ಎಚ್.ಆಂಜನೇಯ, ಶಾಸಕ ಟಿ.ವೆಂಕಟರಮಣಯ್ಯ, ಪಿಳ್ಳಮುನಿಶಾಮಪ್ಪ ಸೇರಿದಂತೆ ಮಾದಾರ ಚನ್ನಯ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು. ಸಭೆಯಲ್ಲಿ ದಲಿತ ಮುಖಂಡರಾದ ಆರ್.ಸಿ.ರಾಮಲಿಂಗಯ್ಯ, ರಾಮಕೃಷ್ಣಯ್ಯ, ಆದಿತ್ಯನಾಗೇಶ್, ಎನ್.ಆಂಜನಮೂರ್ತಿ, ವಿ.ವೆಂಕಟೇಶ್, ಮುನಿಸುಬ್ಬಯ್ಯ, ಪಿ. ಮೂರ್ತಿ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement