ಬಿಎಂಟಿಸಿ ಬಸ್‌ಗೆ ಬೆಂಕಿ, ಸುಟ್ಟು ಕರಕಲು
ಆನೇಕಲ್ಲು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಬಿದರಗುಪ್ಪೆ ಬಳಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆಯಿಂದ ಸರ್ಜಾಪುರ ಮಾರ್ಗ ಆನೇಕಲ್ಲಿಗೆ ಬರುತ್ತಿದ್ದ 378 ಬಿ ಮಾರ್ಗ ಸಂಖ್ಯೆ ಬಸ್ ಸಿದರಗುಪ್ಪೆ ಬಳಿ ಬರುತ್ತಿದ್ದಾಗ ಹಿಂಬದಿ ಟೈರ್ ಜಾಯಿಂಟ್ ಕಳಚಿ ಬಿದ್ದು ಚಕ್ರವು ಡ್‌ಸೆಲ್ ಟ್ಯಾಂಕಿಗೆ ಬಡಿದಿದೆ. ಟೈರ್ ಬಡಿದ ರಭಸಕ್ಕೆ ಟ್ಯಾಂಕ್ ಒಡೆದು ಡೀಸೆಲ್ ಸೋರಿ ಬೆಂಕಿ ತಗಲಿದೆ. ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಸ್‌ಗೆ ಹೊಗೆ ಆವರಿಸಿದ್ದನ್ನು ಕಂಡ ಚಾಲಕ ದೈರ್ಯ ಹಾಗೂ ಸಮಯೋಚಿತ ನಿರ್ಧಾರದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿ ಹತ್ತಿದ ಬಸ್ಸನ್ನು ಕೂಡಲೇ ಬಯಲು ಪ್ರದೇಶ ಕಡೆಗೆ ತಿರುಗಿಸಿ ಜನರನ್ನು ಮುಂಬಾಗಿಲಿನಿಂದ ನಿಧಾನವಾಗಿ ಇಳಿಯುವಂತೆ ತಿಳಿಸಿದರು. ಮಕ್ಕಳು, ವೃದ್ಧರು ಇಳಿಯಲು ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿರ್ವಾಹಕರು ನೆರವು ನೀಡಿದರು. ಕಡಿಮೆ ಸಂಖ್ಯೆಯಲ್ಲಿದ್ದ ಪ್ರಯಾಣಿಕರು ವಿರಳವಾಗಿದ್ದ ರಸ್ತೆಯಿಂದಾಗಿ ಯಾವುದೇ ಅನಾಹುತ ನಡೆಯಲಿಲ್ಲ.