ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕ್ರೀಡೆ ಬಾಂಧವ್ಯದ ಸೇತುವೆಯಾಗಲಿ'

Rashmi Kasaragodu
Updated On : 1 Mar 2014, 1:05 am

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ನೆಲ್ಲುಗುದಿಗೆ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆದವು. ಎಫ್‌ಸಿಸಿ ಕ್ರಿಕೆಟರ್ಸ್ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಉದ್ಘಾಟಿಸಿದರು. ಅವರು ಮಾತನಾಡಿ ಹಳ್ಳಿಗಳಲ್ಲಿ ನಡೆಯುವ ಈ ಬಗೆಯ ಕ್ರೀಡಾ ಚಟುವಟಿಕೆಗಳು ಪರಸ್ಪರ ಬಾಂದವ್ಯ ಬೆಸೆಯುವ ಮಹತ್ವದ ಕೆಲಸ ಮಾಡುತ್ತವೆ. ಗ್ರಾಮೀಣ ಭಾಗದಲ್ಲೂ ಇತ್ತೀಚೆಗೆ ಕ್ರಿಕೆಟ್ ಅಬ್ಬರ ಕಾಣಸಿಗುತ್ತಿದೆ. ಪರಿಣಾಮವಾಗಿ ನಮ್ಮ ದೇಸೀ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಯುವಕರು ಕ್ರಿಕೆಟ್ ಜೊತೆಯಲ್ಲಿ ಇತರ ದೇಸೀ ಕ್ರೀಡೆಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದರು. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಅಪ್ಪಯ್ಯಣ್ಣ, ಒಕ್ಕಲಿಗರ ಸಂಘದ ಸದಸ್ಯ ಬಿ.ಮುನೇಗೌಡ, ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಾಬು ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಮನೆಗೆ ಭೇಟಿ
ಕನಕಪುರ: ಕೇಬಲ್ ಹಾಗೂ ಟಿವಿ ಹಾವಳಿಯಿಂದ ಮಕ್ಕಳು ಅಭ್ಯಾಸದಿಂದ ವಿಮುಖರಾಗುತ್ತಿದ್ದಾರೆ. ಪೋಷಕರು ಪರೀಕ್ಷಾ ಕಾಲದಲ್ಲಿ ಎರಡು ತಿಂಗಳ ಕಾಲ ಕೇಬಲ್ ಸಂಪರ್ಕ ತಪ್ಪಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್ ಕಿವಿಮಾತು ಹೇಳಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕನಕಪುರದ ಶಿಕ್ಷಣ ಫೌಂಡೇಷನ್ ವತಿಯಿಂದ ತಾಲೂಕಿನ 34 ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಮಾರ್ಗದರ್ಶನ ಶಿಬಿರ ನಡೆಸುತ್ತಿದ್ದು ಮಕ್ಕಳ ಅಧ್ಯಯನದ ಬಗ್ಗೆ ಅರಿತುಕೊಳ್ಳಲು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಮನೆಮನೆಗೆ ಭೇಟಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಂಯೋಜಕ ಪ್ರಸನ್ನಕುಮಾರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಹೇಶ್ ಕುಮಾರ್, ಶಿಕ್ಷಣ ಸಂಯೋಜಕರಾದ ವಿಶ್ವನಾಥ್, ಮುತ್ತುರಾಜ್, ಸ್ವಾಮಿ, ಅಶ್ವತ್ಥ್, ಅರುಣಕಾಂತ ಪಾಲ್ಗೊಂಡಿದ್ದರು.
ಹಾಲು ಸಹಕಾರ ಸಂಘಕ್ಕೆ ಆಯ್ಕೆ
ಚನ್ನಪಟ್ಟಣ: ತಾಲೂಕಿನ ಬಿ.ವಿ.ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಪಿ.ಮಹೇಶ್, ಉಪಾಧ್ಯಕ್ಷರಾಗಿ ದೊಡ್ಡೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷರನ್ನು ಗ್ರಾಪಂ ಅಧ್ಯಕ್ಷ ಗಿರೀಶ್‌ಬಾಬು, ಶಿವಮಲ್ಲೇಗೌಡ, ಈಶ್ವರಪ್ಪ, ಸತೀಶ್, ಪುಟ್ಟಪ್ಪ, ಕೃಷ್ಣೇಗೌಡ, ದೊರೆಸ್ವಾಮಿ, ನಂದೀಶ್, ಸುಮಿತ್ರಮ್ಮ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement