ಜಿಲ್ಲಾ ಕೇಂದ್ರಕ್ಕಾಗಿ ಕಲಾವಿದರ ಭಜನೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಕಳೆದ 20 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶುಕ್ರವಾರ ಕಲಾವಿದರ ಸಂಘಗಳು ಸಾಥ್ ನೀಡಿದ್ದವು.
ತಾಲೂಕು ಕಚೇರಿ ಆವರಣದಲ್ಲಿ ಸಾಂಪ್ರದಾಯಿಕ ಭಜನೆ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಕಲಾವಿದರು, ಪೌರಾಣಿಕ ಪಾತ್ರಗಳು, ರಂಗ ಗೀತೆಗಳನ್ನು ಹಾಡಿ ಚಳವಳಿಯ ತೀವ್ರತೆಯನ್ನು ಮಾರ್ಮಿಕವಾಗಿ ಪ್ರತಿನಿಧಿಸಿದ್ದು ವಿಶೇಷವಾಗಿತ್ತು.
ಹತ್ತಾರು ಕಲಾವಿದರು, ಹಾರ್ಮೋನಿಯಂ, ತಬಲ, ಮುಖವೀಣೆ, ಖಂಜಿರ, ಮೃದಂಗ, ಜಾಗಟೆ, ತಾಳ ಮತ್ತಿತರ ವಾದ್ಯಗಳೊಂದಿಗೆ ಧರಣಿಗೆ ಕುಳಿತು, ದೈವಸ್ತುತಿಗಳನ್ನು ಹಾಡಿದರು. ಅದೇ ರೀತಿ ಹನುಮಂತ, ಜಾಂಬವ, ಶ್ರೀಕೃಷ್ಣನ ಪಾತ್ರಗಳಿಗೆ ಪೂರಕವಾದ ರಂಗ ಗೀತೆಗಳ ಕಂದ ಪದ್ಯಗಳನ್ನು ಹಾಡಿ ರಂಜಿಸಿದರು. ಪಕ್ಕಾ ದೇಸೀ ಶೈಲಿಯಲ್ಲಿ ನಡೆದ ಪ್ರತಿಭಟನೆ ಹಲವು ವಿಧಗಳಲ್ಲಿ ಗಮನ ಸೆಳೆಯಿತು.
ಕಲಾವಿದರ ಸಂಘದ ಜಿಲ್ಲಾ ಗೌ.ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ದೊಡ್ಡಬಳ್ಳಾಪುರದ ಜನರ ಬಹುದಿನಗಳ ಬೇಡಿಕೆ ಮತ್ತು ನ್ಯಾಯಸಮ್ಮತ ಒತ್ತಾಯವನ್ನು ಸರ್ಕಾರ ಪರಿಗಣಿಸಬೇಕಿದೆ. ಎಲ್ಲ ರೀತಿಯಲ್ಲೂ ಅರ್ಹ ಮತ್ತು ಸೂಕ್ತ ಎನಿಸಿರುವ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು.
ಈ ವಿಚಾರದಲ್ಲಿ ವಿಳಂಬ ಧೋರಣೆ, ಮೀನ-ಮೇಷ ಎಣಿಸುವ ಹುನ್ನಾರಗಳು ಸಲ್ಲದು. ಕಲಾವಿದರು ಬೀದಿಗೆ ಬಂದು ಪ್ರತಿಭಟಿಸುವ ಹಂತಕ್ಕೆ ಚಳವಳಿ ಹೋಗಿದೆ ಎಂದರೆ ಇದರೆ ವಸ್ತುನಿಷ್ಠ ತೀವ್ರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.
ಅನೇಕ ಕಲಾವಿದರು ಮತ್ತು ಹೋರಾಟ ಸಮಿತಿಯ ಮುಖಂಡರು ಪ್ರತಿಭಟನಾ ಧರಣಿ ವೇಳೆ ಮಾತನಾಡಿ, ಸರ್ಕಾರ ಹೊಣೆಯಾಧಾರಿತವಾಗಿ ನಡೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ವಿಚಾರವನ್ನು ರಾಜಕೀಯ ಪಕ್ಷಗಳು ಓಟಿಗಾಗಿ ಬಳಕೆ ಮಾಡಿಕೊಳ್ಳುವುದು ಸಹಜವಾಗಿದೆ. ಇದಕ್ಕೆ ಅವಕಾಶ ಕೊಡದೆ, ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಅಧಿಕೃತ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಬೆಂ.ಗ್ರಾ. ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಮಾರುತಿ ಕನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಹವ್ಯಾಸಿ ರಂಗಭೂಮಿ ಕಲಾವಿದರ ಸಂಘ ಸೇರಿದಂತೆ ಅನೇಕ ಕಲಾವಿದರ ಸಂಘಗಳು, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಇಂದು ಯಾರ ಸರದಿ: ಇಂದು ಛಾಯಾಗ್ರಾಹಕರ ಧರಣಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ತಾಲೂಕು ಫೋಟೋ ಮತ್ತು ವೀಡಿಯೋ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಮಾ.1ರಂದು ಬೆಳಗ್ಗೆ 10 ಗಂಟೆಗೆ ಧರಣಿ ಪ್ರತಿಭಟನೆ ನಡೆಯಲಿದೆ.