ದುಶ್ಚಟಕ್ಕೆ ದಾಸನಾದರೆ ಸರ್ವನಾಶ
ಕ.ಪ್ರ.ವಾರ್ತೆ ರಾಮನಗರ ಫೆ.28
ಮದ್ಯಪಾನ ಮತ್ತಿತರೆ ದುಶ್ಚಟಗಳಿಗೆ ದಾಸರಾದರೆ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಜತೆಗೆ ಕೌಟುಂಬಿಕ ವ್ಯವಸ್ಥೆಯೂ ನಾಶವಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಎಚ್ಚರಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆಯಿಂದ ಶುಕ್ರವಾರ ನಡೆದ ಮದ್ಯಪಾನದ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದುಶ್ಚಟಗಳು ಮನುಷ್ಯನನ್ನು ಹಂತ ಹಂತವಾಗಿ ಕೊಲ್ಲುತ್ತವೆ ಎಂದರು.
ಸಾಮಾಜಿಕ ಪಿಡುಗು: ಮದ್ಯಪಾನ ಸಹಿತ ದುಶ್ಚಟಗಳು ಸಾಮಾಜಿಕ ಪಿಡುಗಾಗಿ ಪರಿಣಮಿಸಿವೆ. ಮಹಿಳೆಯರೂ ಕೂಡ ಮದ್ಯ ಸೇವನೆಯ ಜತೆಗೆ ಇತರೆ ದುಶ್ಚಟಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಕೌಟುಂಬಿಕ ಕಲಹಗಳು ದಿನೇ ದಿನೇ ಹಚ್ಚುತ್ತಿವೆ ಎಂದು ವೆಂಕಟೇಶ್ ವಿಷಾದಿಸಿದರು.
ಕುಡಿತದ ದುಷ್ಪರಿಣಾಮದಿಂದ ವ್ಯಕ್ತಿಯು ಮಾನಸಿಕ, ಭೌತಿಕ, ಬೌದ್ಧಿಕ, ಸಾಮಾಜಿಕವಾಗಿ ಅವಸಾನಗೊಳ್ಳುತ್ತಾನೆ. ಅದು ಆತನ ಕುಟುಂಬದ ಮೇಲೂ ದುಷ್ಪರಿಣಾಮ ಬೀರಲಿದೆ. ಕುಡಿತ ಚಟಕ್ಕೆ ಬಿದ್ದವನು ಅಂಗಾಂಗಗಳು ನಾಶ ಹೊಂದಿ, ಸಾವಿನ ಹಾದಿ ಹಿಡಿಯುತ್ತಾನೆ ಎಂದರು.
ಹದಿಹರೆಯದವರು ದುಶ್ಚಟಗಳ ಆಕರ್ಷಣೆಗೊಳಗಾಗುವುದು ಸಹಜ. ಈ ವಯಸ್ಸಿನಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಆಟೋಟ ಹಾಗೂ ಓದಿನ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವೆಂಕಟೇಶ್ ಕಿವಿಮಾತು ಹೇಳಿದರು.
ಅಪಘಾತ ಹೆಚ್ಚಳ: ಜನರು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಪ್ರಸ್ತುತ ಸಂಭವಿಸುತ್ತಿರುವ ಭಾಗಶಃ ಅಪಘಾತಗಳಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದೇ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮನೋವೈದ್ಯೆ ಡಾ.ಪಿ.ರಜನಿ ತಿಳಿಸಿದರು. ಸಮೀಕ್ಷೆಗಳ ಪ್ರಕಾರ ಯುವಕರು ಮದ್ಯಪಾನ ಮಾಡಿ ವಾಹನ ಚಲಿಸಿ, ಅಪಘಾತಕ್ಕೆ ಕಾರಣ ಆಗುತ್ತಿರುವವರಲ್ಲಿ ಯುವಕರೇ ಹೆಚ್ಚಿದ್ದಾರೆ. ಅವರಿಂದಾಗಿ ರಸ್ತೆಯಲ್ಲಿ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸುವ ಇತರರೂ ಕೂಡ ಸಾವು-ನೋವು ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.
ದೇಶಾಭಿವೃದ್ಧಿಗೆ ಪೆಟ್ಟು: ಶೇ.70ರಷ್ಟು ಪುರುಷರು, ಶೇ.17ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬರುತ್ತದೆ. ನಿರ್ದಿಷ್ಟ ಗುರಿಯನ್ನು ಹೊಂದಿರದ ಯುವ ಸಮುದಾಯ ಕ್ಷಣಿಕ ಸುಖಕ್ಕಾಗಿ ಮದ್ಯಪಾನ ಸೇರಿದಂತೆ ಇತರೆ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುವುದರ ಜತೆಗೆ ದೇಶದ ಅಭಿಛಿದ್ಧಿಯೂ ಕುಂಠಿತವಾಗುತ್ತಿದೆ ಎಂದು ಡಾ.ರಜನಿ ಹೇಳಿದರು.
ಮದ್ಯಪಾನದಿಂದ ಆರೋಗ್ಯ ಹದಗೆಡುವುದರ ಜತೆಗೆ ಖಿನ್ನತೆ, ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಉತ್ತಮವಾದ ವೈವಾಹಿಕ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಕರಾತ್ಮಕವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಇದರಿಂದ ಸಂದೇಹ, ಅನುಮಾನದಂತಹ ಖಿನ್ನತೆಯ ಖಾಯಿಲೆ ಉಂಟಾಗುತ್ತದೆ ಎಂದು ತಿಳಿಸಿದರು.
ಅಪರಾಧವೂ ಹೆಚ್ಚಳ: ಪ್ರಸ್ತುತ ಸನ್ನಿವೇಶದಲ್ಲಿ ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಸಮುದಾಯ ಕುಡಿದ ಅಮಲಿನಲ್ಲಿ ಕೊಲೆ, ದರೋಡೆಯಂತಹ ಹೀನಕೃತ್ಯಗಳನ್ನು ಮಾಡಿ ತಮ್ಮ ಅಮೂಲ್ಯವಾದ ಜೀವನ ಜೈಲಿನಲ್ಲಿ ಕಳೆಯುತ್ತಿದ್ದಾರೆ ಎಂದು ಡಾ.ರಜನಿ ಅಸಮಾಧಾನ ವ್ಯಕ್ತಪಡಿಸಿದರು. ಯುವ ಸಮುದಾಯ ದುಶ್ಚಟಗಳಿಂದ ದೂರವಾಗಿ, ಮಹನೀಯರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು. ಎಷ್ಟೇ ಸಂಕಷ್ಟಗಳು, ಒತ್ತಡಗಳು ಎದುರಾದರೂ ದುಶ್ಚಟಗಳತ್ತ ಮಾರು ಹೋಗದಿರಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯನರಸಿಂಹ ಕರೆ ನೀಡಿದರು.
ರೋಟರಿ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್ ಮಾತನಾಡಿದರು. ಪ್ರಾಂಶುಪಾಲ ಪ್ರೊ. ಡಿ.ರಂಗಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಭವ್ಯ ಪ್ರಾರ್ಥಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಮೀದ್‌ಖಾನ್ ಸ್ವಾಗತಿಸಿದರು. ಎಂ.ವಿ.ರಾಘವೇಂದ್ರ ವಂದಿಸಿದರು.