ನಟ ಸಿ.ಆರ್. ಸಿಂಹ ನಿಧನಕ್ಕೆ ಸಂತಾಪ
ದೊಡ್ಡಬಳ್ಳಾಪುರ: ಹಿರಿಯ ರಂಗಕರ್ಮಿ, ಚಿತ್ರನಟ ಸಿ.ಆರ್.ಸಿಂಹ ನಿಧನಕ್ಕೆ ಇಲ್ಲಿನ ಸಾಂಸ್ಕೃತಿಕ ಕ್ಷೇತ್ರ ಕಂಬನಿ ಮಿಡಿದಿದೆ. ತಮ್ಮ ವಿನೂತನ ಶೈಲಿ ಸಂಭಾಷಣೆ ಮತ್ತು ಅಭಿನಯ ಮೂಲಕ ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅನನ್ಯ ನಟರಾಗಿ ಗುರ್ತಿಸಿಕೊಂಡಿದ್ದ ಸಿಂಹ ಅವರ ಸಾಂಸ್ಕೃತಿಕ ಕೊಡುಗೆ ಅಪಾರ. ಚನ್ನಪಟ್ಟಣದಲ್ಲಿ ಹುಟ್ಟಿ ಬೆಳೆದ ಅವರು ರಾಜ್ಯಾದ್ಯಂತ ರಂಗಭೂಮಿ ಮೂಲಕ ಹೆಸರು ಮಾಡಿದರು. ನಂತರ ಚಲನಚಿತ್ರ ಕ್ಷೇತ್ರದಲ್ಲಿ ಗುರ್ತಿಸಿಕೊಂಡ ಮೇಲೂ ರಂಗಭೂಮಿ ನಂಟು ಬಿಡದೆ ಅಪ್ಪಟ ರಂಗ ಕಲಾವಿದನಾಗಿ ಗುರ್ತಿಸಿಕೊಂಡಿದ್ದರು. ನಿಧನದಿಂದ ಸಾಂಸ್ಕೃತಿಕ ಕ್ಷೇತ್ರದ ಅಭಿಜಾತ ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹಲವರು ಸಂತಾಪ ಸೂಚಿಸಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ಭುವನೇಶ್ವರಿ ಕನ್ನಡ ಸಂಘ, ಸಂಸ್ಕೃತಿ ಟ್ರಸ್ಟ್, ತಾಲೂಕು ಕಲಾವಿದರ ಸಂಘ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಛಾಯಾಗ್ರಾಹಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಸಂತಾಪ ಸೂಚಿಸಿವೆ.
ಕಸಾಪ, ವಿವಿಧ ಸಂಘಟನೆ, ಚಿತ್ರಪ್ರೇಮಿಗಳ ಕಂಬನಿ
ಚನ್ನಪಟ್ಟಣ: ಹಿರಿಯ ರಂಗಕರ್ಮಿ ಸಿ.ಆರ್.ಸಿಂಹ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಎಂದು ತಾಲೂಕು ಕಸಾಪ ಮತ್ತು ಚಿತ್ರಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.
ತಾಲೂಕಿನವರಾದ ಸಿ.ಆರ್.ಸಿಂಹ ನಿಧನ ಕೇವಲ ತಾಲೂಕನ್ನು ಮಾತ್ರವಲ್ಲದೆ,ಇಡೀ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದ್ದು, ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದ ಸಿ.ಆರರ್ಸಿಂಹ ಸಾವಿನಿಂದಾಗಿ ತಾಲೂಕು ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದು ಕೊಂಡಿದೆ ಎಂದು ವಿಷಾದಿಸಿದ್ದಾರೆ.
ಸಂತಾಪ: ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು, ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು, ಕಸಾಪ ನಿಕಟಪೂರ್ವ ಅಧ್ಯಕ್ಷ ಸು.ತ.ರಾಮೇಗೌಡ, ಬಿ.ಟಿ.ಚಿಕ್ಕಪುಟ್ಟೇಗೌಡ, ಕಸಾಪ ಕಾರ್ಯದರ್ಶಿಗಳಾದ ರಾಮಕೃಷ್ಣಯ್ಯ ಬ್ರಹ್ಮಣೀಪುರ, ವಿಜಯ್‌ರಾಂಪುರ, ನಾಗರಾಜು, ಶಿವರಾಮು ಮೈಲನಾಯಕನಹಳ್ಳಿ, ಶ್ರೀನಿವಾಸ ರಾಂಪುರ ಮತ್ತಿತರರು ಕಂಬನಿ ಮಿಡಿದಿದ್ದಾರೆ.
ಬಿ.ಟಿ.ನಾಗೇಶ್ ವಿಷಾದ: ಸಿ.ಆರ್. ಸಿಂಹ ನಿಧನದಿಂದ ನಾಡಿನ ಸಾಹಿತ್ಯ ಕ್ಷೇತ್ರಗಳಾದ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಮಗನರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ತಿಳಿಸಿದ್ದಾರೆ.
ನಾಳೆ, ನಾಡಿದ್ದು ಗ್ರಾಮದೇವತೆ ಕೆಂಕೇರಮ್ಮ ಮಹೋತ್ಸವ
ಕನಕಪುರ: ಕನಕಪುರ ಪಟ್ಟಣದ ಗ್ರಾಮದೇವತೆ ಕೆಂಕೇರಮ್ಮ ದೇವಾಲಯದ ರಾಜಗೋಪುರ, ಮಹಾದ್ವಾರ ಉದ್ಘಾಟನೆ, ಮಹಾ ಕುಂಭಾಭಿಷೇಕ ಹಾಗೂ ಮಹಾಚಂಡಿಕಾ ಹೋಮ ಮಾ.2 ಹಾಗೂ3 ರಂದು ನಡೆಯಲಿವೆ.
ಕೆಂಕೇರಮ್ಮ ಸೇವಾ ಟ್ರಸ್ಟ್ ವತಿಯಿಂದ ಮಾ.2 ರಂದು ಗಂಗೆಪೂಜೆ,ಗಣಪತಿ,ನವಗ್ರಹ, ಮೃತ್ಯುಂಜಯ, ಮೂಲಮಂತ್ರ ಹೋಮಗಳು, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿವೆ. ಮಾ.3 ರಂದು ಬೆಳಗ್ಗೆ ಕಳಸ ಪ್ರತಿಷ್ಠಾಪನೆಯನ್ನು ದೇಗುಲಮಠದ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ನೆರವೇರಿಸಲಿದ್ದು, ಮಹಾದ್ವಾರದ ಉದ್ಘಾಟನೆಯನ್ನು ಯಾದವ ಮಹಾಸಂಸ್ಥಾನ ಯಾದವಾನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮೀಜಿ, ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಶಿವಗಿರಿ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಚಿವರಾದ ಪ್ರಕಾಶ್ ಹುಕ್ಕೇರಿ,ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಭಾಗವಹಿಸಲಿದ್ದಾರೆ.