ಯೋಗೇಶ್ವರ್ ನಡೆ ಕಾದುನೋಡಿ...
ರಾಮನಗರ: ಸಮಾಜವಾದಿ ಪಕ್ಷದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರೋ ಅಥವಾ ತಾವಿರುವ ಪಕ್ಷದಲ್ಲೇ ಉಳಿದು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಬೆಂಬಲಿಸುತ್ತಾರೋ ಎನ್ನುವುದನ್ನು ಪರೆದೆ ಮೇಲೆ ನೋಡಿ.
ಇದು, ಚಿತ್ರನಟರೂ ಆಗಿರುವ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸಿನಿಮೀಯ ಶೈಲಿಯ ಪ್ರತಿಕ್ರಿಯೆ. ಸಿಪಿವೈ ರಕ್ತದಲ್ಲಿ ಕಾಂಗ್ರೆಸ್ಸೇ ತುಂಬಿದೆ. ಅನಿವಾರ್ಯ ಕಾರಣಕ್ಕೆ ಸಮಾಜವಾದಿ ಪಕ್ಷ ಸೇರಿದ್ದರಾದರೂ ಈಗ ಅದರ ಸಹವಾಸ ಬಿಟ್ಟಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ, ಮಾತೃಪಕ್ಷದ ಪ್ರೇಮ ಮೆರೆದಿದ್ದರು ಎಂದರು. ಯೋಗೇಶ್ವರ್, ನನ್ನ ಒಡನಾಟ ಚೆನ್ನಾಗಿದೆ ಎಂದರು.
ಸಿಪಿವೈ ಬಂದರೆ ಸ್ವಾಗತ: ಎ.ಸಿ. ವೀರೇಗೌಡ
ಚನ್ನಪಟ್ಟಣ: ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವುದಾದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯೋಗೇಶ್ವರ್ ಕಾಂಗ್ರೆಸ್ನಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ, ಅವರಿಗೆ ಕಾಂಗ್ರೆಸ್ ಮಾತೃಪಕ್ಷವೂ ಆಗಿರುವುದರಿಂದ ವಾಪಸ್ ಬಂದರೆ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗುತ್ತದೆ ಎಂದಿದ್ದಾರೆ.