ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶ್ರೀರಂಗ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ

Rashmi Kasaragodu
Updated On : 1 Mar 2014, 1:05 am

ಕ.ಪ್ರ.ವಾರ್ತೆ     ರಾಮನಗರ     ಫೆ.28
ಹೇಮಾವತಿಯಿಂದ ಕುಣಿಗಲ್ ಮತ್ತು ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ರು.280 ಕೋಟಿ ವೆಚ್ಚದ ಶ್ರೀರಂಗ ಯೋಜನೆ ಹಲವು ವರ್ಷಗಳ ಕನಸು. ಅದನ್ನು ನನಸಾಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆಯನ್ನು ಕಳೆದ ವರ್ಷದ ಆಯವ್ಯಯದಲ್ಲೇ ಸೇರಿಸಲಾಗಿತ್ತು. ಕಳೆದ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಡಿಪಿಆರ್ ಕೂಡ ಆಗಿದೆ. ಹಣಕಾಸು ಒಪ್ಪಿಗೆಯೂ ಸಿಕ್ಕಿದೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಿಮಿಕ್ ಎಚ್‌ಡಿಕೆ ಚಾಳಿ: ಎಚ್.ಡಿ.ಕುಮಾರಸ್ವಾಮಿ ಹೇಳಿಕೇಳಿ ಸಿನೆಮಾ ನಿರ್ಮಾಪಕ ಮತ್ತು ವಿತರಕ. ಗಿಮಿಕ್ಮಾಡಿ ಸಿನೆಮಾದಿಂದ ಗಲ್ಲಾಪೆಟ್ಟಿ ತುಂಬಿಸಿಕೊಳ್ಳುವುದು ಅವರ ಚಾಳಿ. ಹೀಗಾಗಿಯೇ ಅವರು ಮಹತ್ವಾಕಾಂಕ್ಷೆಯ ಶ್ರೀರಂಗ ಯೋಜನೆಯನ್ನು ಚುನಾವಣೆ ಗಿಮಿಕ್ ಎಂದಿದ್ದಾರೆ ಎಂದು ಶಿವಕುಮಾರ್  ತಿರುಗೇಟು ನೀಡಿದರು.
ಕುಮಾರಸ್ವಾಮಿ ರೀತಿ ನಾನು ಗಿಮಿಕ್ ಮಾಡುವವನಲ್ಲ. ಶ್ರೀರಂಗ ಯೋಜನೆಯನ್ನು ಕಾರ್ಯಗತಗೊಳಿಸಿ, ನನ್ನದು ಗಿಮಿಕ್ ರಾಜಕಾರಣವಲ್ಲ ಎನ್ನುವುದನ್ನು ಸಾಧಿಸಿ ತೋರಿಸಲು ಬದ್ಧವಾಗಿದ್ದೇನೆ. ನನ್ನನ್ನು ನಂಬಿ ಅವಕಾಶ ನೀಡಿರುವ ತವರು ಜಿಲ್ಲೆ ಜನರ ಋಣ ತೀರಿಸುವುದು ನನ್ನ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.
ಸ್ಪರ್ಧೆಗೆ ಇಳಿಯಲಾರೆ: ಕುಮಾರಸ್ವಾಮಿ ನೀರಾವರಿ ತಜ್ಞರಂತೆ ಮಾತನಾಡುತ್ತಿದ್ದು, ತಮ್ಮದೇ ಆದ ಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ. ಶ್ರೀರಂಗ ಯೋಜನೆಗೆ ಮಂಜೂರು ಮಾಡುವ ಮೊದಲೇ ನೀರಾವರಿ ತಜ್‌ಞರೊಂದಿಗೆ ಚರ್ಚಿಸಿ, ವರದಿ ಪಡೆಯಲಾಗಿದೆ. ಹೀಗಾಗಿ ಕುಮಾರಸ್ವಾಮಿ ಜತೆಗೆ ಮಾತಿನ ಸ್ಪರ್ಧೆಗೆ ಇಳಿಯಲು ಬಯಸುವುದಿಲ್ಲ ಎಂದು ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ: ಅವರ ಕೈಯಲ್ಲಿ ಆಗದ್ದನ್ನು ನಾವು ಮಾಡುತ್ತಿದ್ದೇವೆ. ಅವರು ಏನೇ ಲೇವಡಿ, ಟೀಕೆ ಮಾಡಿದರೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಮ್ಮ ಉದ್ದೇಶವೇನಿದ್ದರೂ ರಾಮನಗರ ಜಿಲ್ಲೆಯ ನೀರಿನ ಬವಣೆ ನೀಗಿಸುವುದಷ್ಟೆ. ಅದನ್ನು ಸಾಧಿಸಿ ಜನತೆಗೆ ನೀಡಿದ್ದ ವಾಗ್ದಾನ ಈಡೇರಿಸಲು ಬದ್ಧ ಎಂದರು.
ಕೆಡಿಪಿ ಸಭೆ ಹೊಸದಲ್ಲ: ಎರಡೂವರೆ ದಶಕದಿಂದ ಶಾಸಕನಾಗಿ ನಾನು ಕಾರ್ಯ ನಿರ್ವಹಿಸಿದ್ದೇನೆ. ತಾಲೂಕು ಮಟ್ಟದಲ್ಲಿ ಇರುವ ಸಮಸ್ಯೆಗಳ ಅರಿವಿನ ಸ್ಪಷ್ಟ ಚಿತ್ರಣ ತಿಳಿದಿದ್ದೇನೆ. ಹೀಗಾಗಿಯೇ ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಉದ್ದೇಶಿಸಿದ್ದೇನೆ. ಇದನ್ನು ಹೊಸದಾಗಿ ನಾನೇನು ಪ್ರಾರಂಭಿಸುತ್ತಿಲ್ಲ ಎಂದು ಉತ್ತರ ನೀಡಿದರು. ಬರ ನಿರ್ವಹಣೆಗೆ ಸಜ್ಜು: ಮಳೆ ಅಭಾವದಿಂದ ಕುಡಿಯುವ ನೀರು ಸಹಿತ ನಾನಾ ಬವಣೆಗಳಿಗೆ ಗುರಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಸಮರ್ಪಕ ನಿರ್ವಹಣೆ ಸಜ್ಜಾಗಿದ್ದೇವೆ. ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಅರ್ಜಿ ಸಲ್ಲಿಕೆಯಾದ 24 ತಾಸಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಎಸ್ಪಿ ಅನುಪಮ್ ಅಗ್ರವಾಲ್, ಮುಖಂಡರಾದ ಎ.ಮಂಜುನಾಥ್, ಮರಿದೇವರು, ರಘುನಂದನ್‌ರಾಮಣ್ಣ, ಕೆ.ರಮೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement