ಎಲ್ಲೆಡೆ ಸಂಭ್ರಮದ ವರ್ಷಾಚರಣೆ
ದೊಡ್ಡಬಳ್ಳಾಪುರ: ಹೊಸವರ್ಷವನ್ನು ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಡಿ.31ರ ನಡುರಾತ್ರಿ ವರ್ಷಾರಂಭಕ್ಕೆ ಕಾದುಕುಳಿತಿದ್ದ ಸಾವಿರಾರು ಮಂದಿ ಬೀದಿಗಿಳಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇಲ್ಲಿನ ಆಫೀಸರ್ಸ್ ಅಸೋಸಿಯೇಷನ್, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಸೇರಿದಂತೆ ವಿವಿಧೆಡೆ ಅನೇಕ ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೊಡ್ಡಬಳ್ಳಾಪುರದ ಸುತ್ತಮುತ್ತ ಇರುವ ಹತ್ತಾರು ರೆಸಾರ್ಟ್‌ಗಳಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಯುವಕ-ಯುವತಿಯರು ಮೋಜು-ಮಸ್ತಿಯಲ್ಲಿ ಸಂಭ್ರಮಿಸಿದರು. ನಗರದಲ್ಲಿ ನೂರಾರು ಯುವಕರು ಬೈಕ್‌ಗಳಲ್ಲಿ ಸಂಚರಿಸಿ ಹೊಸವರ್ಷವನ್ನು ಬರಮಾಡಿಕೊಂಡರು.
ಪಾರ್ಟಿ ಸಂಭ್ರಮ: ಹೊಸವರ್ಷದ ಅಂಗವಾಗಿ ಹಲವಾರು ಹೋಟೆಲ್‌ಗಳು, ಡಾಬಾ ಮತ್ತು ರೆಸಾರ್ಟುಗಳಲ್ಲಿ ಪಾರ್ಟಿ ಆಯೋಜನೆಗೊಂಡಿದ್ದವು. ಮಂಗಳವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗಿದ್ದ ಕಾರ್ಯಕ್ರಮಗಳು ಮಧ್ಯರಾತ್ರಿಯವರೆಗೆ ನಡೆದವು. 12 ಗಂಟೆಗೆ ಸರಿಯಾಗಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸುವ ಮೂಲಕ ನೂತನ ವರ್ಷವನ್ನು ಸ್ವಾಗತಿಸಲಾಯಿತು.
ನಿರೀಕ್ಷೆಯ ಸ್ವಾಗತ: ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹಲವರು, ಕಳೆದ ವರ್ಷದ ಸಿಹಿ-ಕಹಿಗಳನ್ನು ನೆನೆಯುತ್ತಾ, ಬರುವ ವರ್ಷವನ್ನು ಅತ್ಯಂತ ನಿರೀಕ್ಷೆಗಳ ಭರದಲ್ಲಿ ಸ್ವಾಗತಿಸುತ್ತಿದ್ದೇವೆ. ಎಲ್ಲೆಡೆ ಶಾಂತಿ, ಸಹಬಾಳ್ವೆ ನೆಲೆಸಬೇಕು. ಮೂಲಭೂತ ಅಗತ್ಯತೆಗಳು ಸಮರ್ಪಕವಾಗಿ ಸಿಗುವಂತಾಗಬೇಕು. ಪರಸ್ಪರ ಸಮನ್ವಯಭಾವದಿಂದ ಬದುಕುವ ವಾತಾವರಣ ಮುಂದುವರೆಯಬೇಕು ಎಂದರು.
ಹೊಸವರ್ಷದ ಅಂಗವಾಗಿ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಾಟಾಗಿದ್ದವು. ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಘಾಟಿ ಸುಬ್ರಹ್ಮಣ್ಯದಲ್ಲಿ ಹೊಸವರ್ಷದ ಅಂಗವಾಗಿ ವಿಶೇಷಾಲಂಕಾರ ಮಾಡಲಾಗಿತ್ತು. ಅದೇ ರೀತಿ ಮಧುರೆ ಶನಿದೇವರ ದೇವಾಲಯದಲ್ಲೂ ಹೊಸವರ್ಷ ವಿಶೇಷ ಪೂಜೆ ನಡೆಯಿತು. ಬೆಳಗಿನ ಜಾವದಿಂದಲೇ ಭಕ್ತರು ಸಾಲುಗಟ್ಟಿ ನಿಂತು ಘಾಟು ಸುಬ್ರಹ್ಮಣ್ಯ ದರ್ಶನ ಪಡೆದರು. ದೂರದೂರುಗಳಿಂದ ಕೂಡ ಭಕ್ತಾದಿಗಳು ಆಗಮಿಸಿ ಹೊಸವರ್ಷವನ್ನು ಧಾರ್ಮಿಕ ಕ್ಷೇತ್ರದಲ್ಲಿ ಆಚರಿಸಿದರು.