ಕಲಾವಿದರ ಪ್ರೋತ್ಸಾಹಿಸಿದರೆ ಕಲೆ ಉಳಿವು
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಜ.1
ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ನೇತೃತ್ವದಲ್ಲಿ ಡಾ.ರಾಜ್ಕುಮಾರ್ ಕಲಾಭವನ (ಪುರಭವನ)ದಲ್ಲಿ 2 ದಿನಗಳ ಕಾಲ ನಡೆದ ನಾಟಕೋತ್ಸವ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ, ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮತ್ತಿತರರು ಮಾತನಾಡಿ ರಂಗಭೂಮಿ ಇಂದು ಅನೇಕ ಆತಂಕಗಳನ್ನು ಎದುರಿಸಿಯೂ ಸಮರ್ಥವಾಗಿ ನಿಲ್ಲುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ನೈಜ ಕಲಾವಂತಿಕೆಯನ್ನು ನಾವು ನೋಡಲು ರಂಗಭೂಮಿಯಲ್ಲಿ ಮಾತ್ರ ಸಾಧ್ಯ. ಸಿನಿಮಾ ನೈಜ ಕಲೆಯ ಅನಾವರಣವಲ್ಲ. ಆದರೆ ಇಂದು ರಂಗಕರ್ಮಿಗಳ ಬದುಕು ದುಸ್ತರವಾಗಿದೆ. ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ವ್ಯವಸ್ಥೆ ಗಮನ ಹರಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಮಾಸಾಶನ ಮತ್ತಿತರ ಸವಲತ್ತುಗಳನ್ನು ನೀಡಬೇಕು. ಹಲವು ಬಾರಿ ನೈಜ ಕಲಾವಿದರನ್ನು ನಿರ್ಲಕ್ಷಿಸುತ್ತಲೇ ಬರಲಾಗುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲಾವಂತಿಕೆ ಉಳಿಯುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಮಧುರೆ ಹೋಬಳಿ ಕಲಾವಿದರ ಸಂಘದಿಂದ ಶ್ರೀರಾಮಮುದ್ರಿಕೆ ಪ್ರಧಾನ ದೃಶ್ಯಾವಳಿ, ಶ್ರೀವಿನಾಯಕ ಕೃಪಾ ಪೋಷಿತ ನಾಟಕ ಮಂಡಲಿಯಿಂದ ಮಾಧವ ಸಂಧಾನ ಪೌರಾಣಿಕ ನಾಟಕ, ಎಸ್.ಮಹದೇವು ತಂಡದಿಂದ ತ್ಯಾಗಿ ಸಾಮಾಜಿಕ ನಾಟಕ, ಗ್ರಾಮಾಂತರ ಮಹಿಳಾ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ, ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಹಗ್ಗ ಜಗ್ಗಾಟ ಮತ್ತು ಗುಂಡು ಎಸೆತದ ಸ್ಪರ್ಧೆಗಳು, ಬಾಲಕಲಾವಿದರಿಂದ ರಂಗಗೀತೆಗಳ ಗಾಯನ, ಆಂಜನೇಯ ಕೃಪಾಪೋಷಿತ ನಾಟಕ ಮಂಡಲಿಯಿಂದ ಶ್ರೀಕೃಷ್ಣ ಕರ್ಣ ರೋಡ್ ಸೀನ್, ರಾಜಘಟ್ಟ ಕನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಹವ್ಯಾಸಿ ಕಲಾವಿದರ ಸಂಘದಿಂದ ಕಂಬನಿ ಸಾಮಾಜಿಕ ನಾಟಕ, ದೇವನಹಳ್ಳಿ ತಾಲೂಕು ಕಲಾವಿದರಿಂದ ಶ್ರೀಕೃಷ್ಣ ಸಂಧಾನ ನೌಟಕ, ಹೊಸಕೋಟೆ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಕಲಾವಿದರಿಂದ ಪೌರಾಣಿಕ ನಾಟಕಗಳ ಪ್ರದರ್ಶನ ನಡೆದವು.
ಬೆಂ.ಗ್ರಾ.ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಡಿ.ಕೆಂಪಣ್ಣ, ಕಾರ್ಯಾಧ್ಯಕ್ಷ ರಾಮಕೃಷ್ಣ ಉಪಾಧ್ಯಕ್ಷ ವೆಂಕಟೇಶಪ್ಪ, ಕಾರ್ಯದರ್ಶಿ ಕೆ.ಎಸ್.ರಾಮಾಂಜಿನಪ್ಪ, ಖಜಾಂಚಿ ಚಂದ್ರಕಲಾ, ಸಂ.ಕಾರ್ಯದರ್ಶಿ ನಾಗರಾಜ್, ಶ್ರೀ ಮಾರುತಿ ಕನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೋಡಿ ಮೂರ್ತಿ ಇದ್ದರು.