ಕಾಟಾಚಾರದ ಸಭೆ: ಕೃಷ್ಣ ಆಕ್ರೋಶ
ಮಾಗಡಿ: ಸಂಕಷ್ಟದಲ್ಲಿರುವ ಬಡ ರೈತರ ನೆರವಿಗೆ ಬರಬೇಕಾದ ಸರ್ಕಾರಿ ಅಧಿಕಾರಿಗಳು, ರೈತರನ್ನು ಸಭೆಗೆ ಆಹ್ವಾನಿಸದೆ ಕಾಟಾಚಾರದ ಸಭೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ತಾ.ಪಂ. ಅಧ್ಯಕ್ಷ ಜಿ.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಗಡಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2013-14ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒರಟು ಧಾನ್ಯ ಮತ್ತು ಬಿಳಿ ಜೋಳ ಖರೀದಿ ಕೇಂದ್ರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಸಭೆಗೆ ರೈತರನ್ನು ಆಹ್ವಾನಿಸದೆ ಇರುವುದು ನೋಡಿದರೆ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯಕ್ಕೆ ಕನ್ನಡಿ ಬೇಕಿಲ್ಲ. ಕೇವಲ ಬಲವಂತವಾಗಿ ನ್ಯಾಯಬೆಲೆ ಅಂಗಡಿಯ ಆಹಾರ ವಿತರಕರನ್ನು ಆಹ್ವಾನಿಸಿ ಸಭೆ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ. ಕೂಡಲೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಹೋಬಳಿ ಮಟ್ಟದಲ್ಲಿ ಕರಪತ್ರ ಹಂಚುವ ಮೂಲಕ ಜಾಗೃತಿಗೊಳಿಸಬೇಕು. ಈ ನಿಟ್ಟಿನಲ್ಲಿ ರೈತರನ್ನು ಒಗ್ಗೂಡಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಮಾಹಿತಿಯನ್ನು ಒದಗಿಸಬೇಕು. ಒರಟು ಧಾನ್ಯ ಖರೀದಿಯಲ್ಲಿ ಹಾಗೂ ಚೆಕ್ ವಿತರಣೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದರಲ್ಲದೆ ರೈತರು ಕಾಡುಪ್ರಾಣಿಗಳ ಹಾವಳಿ ಎದುರಿಸುತ್ತಿದ್ದಾರೆ. ತುಂಬ ಸಂಕಷ್ಟದಲ್ಲಿಯೂ ರೈತರು ಗುಣಮಟ್ಟದ ತರಕಾರಿ, ಇತರೆ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತರುತ್ತಾರೆ. ರೈತರು ತರುವ ತರಕಾರಿಗಳನ್ನು ತೂಕ ಮಾಡಲು ಮಂಡಿಗಳಲ್ಲಿ ಎಲೆಕ್ಟ್ರಾನಿಕ್ ಯಂತಗಳಿಲ್ಲದೆ ತೂಕದಲ್ಲಿ
ವ್ಯತ್ಯಾಸವಾಗುತ್ತಿದ್ದು, ರೈತರನ್ನು ವಂಚಿಸಲಾಗುತ್ತಿದೆ. ರೈತರಿಗೆ ಆಗುತ್ತಿರುವ ವಂಚನೆಯನ್ನು ತಪ್ಪಿಸಲು ಅಧಿಕಾರಿಗಳು, ಮಂಡಿಗಳಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಯಂತ್ರದ ಮೂಲಕವೇ ತೂಕ ಮಾಡಿ ತರಕಾರಿ ಖರೀದಿಸುವಂತೆ ಅಗತ್ಯ ಕ್ರಮ ವಹಿಸಬೇಕಿದೆ. ಜತೆಗೆ ರೈತ ಸಂಘಟನೆಗಳು ಜಾಗೃತರಾಗಿ, ಪ್ರತಿಭಟನೆಯ ಮೂಲಕವೂ ಸಹ ರೈತರಿಗೆ ಆಗುವ ವಂಚನೆ ತಪ್ಪಿಸಲು ಮುಂದಾಗಬೇಕಿದೆ ಎಂದರು.
ಆಹಾರ ಇಲಾಖೆಯ ಶಿರಸ್ತೇದಾರ್ ಸದಾಶಿವಯ್ಯ ಮಾತನಾಡಿ ರೈತರ ನೆರವಿಗೆ ಸರ್ಕಾರ ಬಂದಿದ್ದು, ರೈತರು ತಾವು ಬೆಳೆದ ರಾಗಿ, ಜೋಳ ಇನ್ನಿತರೆ ಧಾನ್ಯಗಳ ಖರೀದಿಗೆ ಬೆಂಬಲ ಬೆಲೆ ಯೋಜನೆ ಕೇಂದ್ರದಲ್ಲಿ ಖರೀದಿಸಲಾಗುತ್ತದೆ. ಒಂದು ಕ್ವಿಂಟಾಲ್ ರಾಗಿ ಖರೀದಿಗೆ 1500 ರು. ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು,
ಜತೆಗೆ ಸರ್ಕಾರ 300 ರು. ಪ್ರೋತ್ಸಾಹ ಧನ ನೀಡಲಿದೆ. ಒಟ್ಟು 1800 ರು.ಗೆ ರಾಗಿಯನ್ನು ಇಲಾಖೆ ಖರೀದಿಸಲಿದೆ. ಒಂದು ಕ್ವಿಂಟಾಲ್ ಬಿಳಿ ಜೋಳಕ್ಕೆ 1520 ರು. ಬೆಂಬಲ ಬೆಲೆಯಿದ್ದು, ಸರ್ಕಾರ 280 ರು. ಪ್ರೋತ್ಸಾಹ ಧನ ನೀಡುವುದರಿಂದ 1800 ರು.ಗೆ ಖರೀದಿಸಲಾಗುತ್ತದೆ. ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಧಾನ್ಯಗಳನ್ನು ತರುವ ರೈತರು ಕಡ್ಡಾಯವಾಗಿ ಪಹಣೆದಾರರಾಗಿರಬೇಕು. ಅಗತ್ಯ ದಾಖಲೆ ಇದ್ದರೆ ಮಾತ್ರ ಬೆಂಬಲ ಬೆಲೆಗೆ ಧಾನ್ಯ ಖರೀದಿಸುವುದು.ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ, ಆರ್.ಟಿ.ಜಿ.ಎಸ್ ಮೂಲಕವೇ ಚೆಕ್‌ಗಳನ್ನು ನೇರವಾಗಿ ಪಹಣಿದಾರರ ಹೆಸರಿಗೆ ನೀಡಲಾಗುವುದು ಎಂದು ವಿವರಿಸಿದರು.
ತಾ.ಪಂ. ಸದಸ್ಯ ಅರುಂಧತಿ ಚಿಕ್ಕಣ್ಣ, ಉಪನಿರ್ದೇಶಕ ಉಲ್ಲಾರು, ಎಂ.ಆರ್.ಚಂದ್ರಶೇಖರ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ತಿಮ್ಮೇಗೌಡ, ರಂಗಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣಪ್ಪ, ರಾಮಣ್ಣ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಹಾಜರಿದ್ದರು.
ಖಂಡನೆ: ರೈತರನ್ನು ಆಹ್ವಾನಿಸದೆ ಕಟಾಚಾರಕ್ಕೆ ಸಭೆ ನಡೆಸಿರುವುದರನ್ನು ಕರ್ನಾಟಕ ಪ್ರಾಂತ ರೈತ ಸಂಘಟನೆಯ ಅಧ್ಯಕ್ಷ ಸಿ.ಆರ್. ನಾಗೇಶ್ ಹಾಗೂ ಪುರಸಭಾ ಮಾಜಿ ಸದಸ್ಯ ರೂಪೇಶ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಾದ ಸರ್ಕಾರಿ ಅಧಿಕಾರಿಗಳು, ರೈತರಿಗೆ ಮಾಹಿತಿಯೇ ನೀಡದೆ ರೈತರನ್ನು ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.