ಜಗತ್ತಿನ ಸೂಪರ್ ಪವರ್ ಭಾರತದ ಕಡೆಗೆ ವಿಶ್ವದ ಗಮನ: ರಾಮ್ದೇವ್
ಕನಕಪುರ: ಜಗತ್ತಿನ ಸೂಪರ್ ಪವರ್ಆಗಿ ಹೊರಹೊಮ್ಮುತ್ತಿರುವ ಭಾರತದ ಕಡೆಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಗಮನಹರಿಸುತ್ತಿವೆ. ದೇಶದ ಅಪೂರ್ವ ಮಾನವ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಅವರು ಕನಕಪುರದ ದೇಗುಲಮಠದ ಆವರಣದಲ್ಲಿ ಸಂತ್ಸಂಗ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜನರ ಸಮಸ್ತ ರೋಗಗಳಿಗೂ ಆಯುರ್ವೇದದಲ್ಲಿ ಔಷಧಿ ಹಾಗೂ ಚಿಕಿತ್ಸೆಗಳಿವೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನೆಚ್ಚರಿಕೆ ವಹಿಸುವುದು ಸ್ವಾಸ್ಥ್ಯಜೀವನಕ್ಕೆ ಅತ್ಯುತ್ತಮ ಮಾರ್ಗವಾಗಿದೆ. ಜನರು ದಿನಕ್ಕೆ ಆರು ಗಂಟೆಗಳಷ್ಟು ನಿದ್ರೆಗಾಗಿ ಮೀಸಲಿಟ್ಟು ಪ್ರತಿದಿನವೂ ನಿಯಮಿತವಾಗಿ ಒಂದು ಗಂಟೆ ಕಾಲ ಯೋಗ,ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಮಿಕ್ಕ ಕಾಲವನ್ನು ಕ್ರಿಯಾಶೀಲ ದುಡಿಮೆಗೆ ಮೀಸಲಿಡಬೇಕು. ಕಾಯಕದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ, ಭ್ರಷ್ಟಾಚಾರವೆಂಬ ವೃಕ್ಷ ದೇಶದಾದ್ಯಂತ ಆಳವಾಗಿ ಹರಡಿದ್ದು ಅದರ ನಿರ್ಮೂಲನೆಗೆ ಯಾವುದೇ ಭಯವಿಲ್ಲದೆ ಜನರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.