ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಾನಪದ ಗ್ರಾಮೀಣ ಸೊಬಗಿನ ಕಾರ್ಯಕ್ರಮ ಆರಂಭ

Mainashree
Updated On : 2 Jan 2014, 12:24 pm

ಕ.ಪ್ರ.ವಾರ್ತೆ  ರಾಮನಗರ   ಜ.1
ಜಾನಪದ ಲೋಕವನ್ನು ವೀಕ್ಷಿಸಲು ಬರುವವರಿಗೆ ಜನಪದರು ಬಳಸುತ್ತಿದ್ದ ವಸ್ತುಗಳ ಭಂಡಾರವನ್ನು ಮತ್ತಷ್ಟು ಸಮೃದ್ಧಗೊಳಿಸಿ, ಜಾನಪದ ಲೋಕವನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ವರ್ಷದಿಂದ ಜಾನಪದ ಗ್ರಾಮೀಣ ಸೊಬಗಿನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.
ಗ್ರಾಮೀಣರು ದಿನನಿತ್ಯ ಬಳಸುತ್ತಿದ್ದ ಎಣ್ಣೆಗಾಣ, ದನದ ಕೊಟ್ಟಿಗೆ, ಬಾವಿಯಲ್ಲಿ ನೀರು ಸೇದುವುದು, ಕಣದ ಕೆಲಸದವರು, ಬಿತ್ತುವ ಕೂರಿಗೆ-ಎತ್ತುಗಳು, ದೀವರ ಗಂಡಸು-ಹೆಂಗಸು, ಮಗು, ಬೀಸು ಕಂಸಾಳೆ, ಗೊರವಯ್ಯ, ಪೂಜಾ ಕುಣಿತ, ಜಗ್ಗಲಿಗೆಯವ, ವೀರಭದ್ರನ ಕುಣಿತ, ಯಕ್ಷಗಾನ ವೇಷ ಸೇರಿದಂತೆ ಇನ್ನಿತರೆ ಕಣ್ಮನ ಸೆಳೆಯುವ ಆಳೆತ್ತರದ ಆಕೃತಿಗಳನ್ನು ಜಾನಪದ ಲೋಕದಲ್ಲಿ ಅಳವಡಿಸಿದ್ದು ನೋಡುಗರ ಮೆಚ್ಚುಗೆ ಪಡೆದಿವೆ ಎಂದು ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಲೆಗಳ ಜೀವಂತಿಕೆಗೆ ಜಾನಪದ ಲೋಕದ ಉಳಿಯುವಿಕೆ ಅಗತ್ಯವಾಗಿದ್ದು, ಈಗಿರುವ ಕಾರ್ಯಕ್ರಮಗಳ ಜತೆಗೆ ಹೊಸ ಕಾರ್ಯಕ್ರಮಗಳನ್ನು ತರಲು ಚಿಂತನೆ ನಡೆಸಲಾಗಿದೆ. ಜನಪದ ಕುಣಿತ, ಜನಪದ ಹಾಡುಗಾರಿಕೆಗಳ ಕಾರ್ಯಕ್ರಮವನ್ನು ಪ್ರತಿ ತಿಂಗಳ 2ನೇ ಹಾಗೂ ಕೊನೆಯ ಭಾನುವಾರಗಳಂದು ಹಮ್ಮಿಕೊಳ್ಳಲಾಗುತ್ತಿದೆ. ವರ್ಷದ ಪ್ರಾರಂಭದ ದಿನವಾದ ಬುಧವಾರ ಮಾದೇಶ್ವರ, ಮಂಠೇಸ್ವಾಮಿ, ಜೋಗಿಪದ, ಚಾಮುಂಡಿ ನಂಜುಡೇಶ್ವರ, ತತ್ವಪದ, ಕೋಲು ಪದ, ತಮಾಷೆ ಪದ, ಮೊದಲಾದ ಪದಗಳ ಹಾಡುಗಾರಿಕೆಯನ್ನು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಜೋಡೆತ್ತುಗಳ ಸ್ಪರ್ಧೆ: ರೈತರ ಸುಗ್ಗಿ ಹಬ್ಬವಾದ ಸಂಕ್ರಾಂತಿ ಸಂದರ್ಭದಲ್ಲಿ ಜಾನಪದ ಲೋಕದಲ್ಲಿ ಪ್ರತಿ ವರ್ಷದಂತೆ ಅಲಂಕಾರಗೊಂಡ ಎತ್ತುಗಳ ಕಿಚ್ಚು ಹಾಯುವ ಕಾರ್ಯಕ್ರಮವನ್ನು ಜ.15ರಂದು ಏರ್ಪಡಿಸಲಾಗಿದೆ. ಈ ಅಂಗವಾಗಿ ಜೋಡೆತ್ತುಗಳ ಸ್ಪರ್ಧೆ ವ್ಯವಸ್ಥೆಗೊಳಿಸಲಾಗಿದ್ದು, ಪ್ರಥಮ ಬಹುಮಾನ ರು.10 ಸಾವಿರ, ದ್ವಿತೀಯ ಬಹುಮಾನ ರು.5 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರು.3 ಸಾವಿರ ನೀಡಲಾಗುವುದು. ಬಹುಮಾನವನ್ನು ವಂದಾರಗುಪ್ಪೆಯ ಎಚ್.ಎಲ್.ಪಾರ್ಥಸಾರಥಿ ಪ್ರಾಯೋಜನ ಮಾಡುವರು ಎಂದು ಹೇಳಿದರು.
ಧನಸಹಾಯಕ್ಕೆ ಮನವಿ: ಜಾನಪದ ಲೋಕದಲ್ಲಿ ಗ್ರಾಮೀಣ ಸಂಸ್ಕೃತಿ ಹಾಗೂ ವಿವಿಧ ಪ್ರಾದೇಶಿಕ ವಾಸ್ತು ಶೈಲಿಯನ್ನು ಪರಿಚಯಿಸುವ ಪಾರಂಪರಿಕ ಕುಟೀರಗಳನ್ನು ನಿರ್ಮಿಸಲಾಗುತ್ತಿದೆ. ಹೊರದೇಶ, ರಾಜ್ಯಗಳಿಂದ ಆಗಮಿಸುವ  ವಿದ್ವಾಂಸರಿಗೆ ಪ್ರಾದೇಶಿಕ ವಾಸ್ತುಶಿಲ್ಪದ ಹಿನ್ನೆಲೆಯನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ. 3 ಕುಟೀರಗಳ ಒಟ್ಟಾರೆ ನಿರ್ಮಾಣದ ವೆಚ್ಚ ರು.65 ಲಕ್ಷವಾಗಿದ್ದು, ಈ ಪೈಕಿ ಪರಿಷತ್ ರು.40 ಲಕ್ಷ ಭರಿಸಿದೆ. ಇನ್ನೂ ರು.25 ಲಕ್ಷ ಹಣದ ಅವಶ್ಯಕತೆ ಇದ್ದು, ಕಲಾಸಕ್ತರು, ಸಾರ್ವಜನಿಕರು ಉದಾರ ಮನಸ್ಸಿನಿಂದ ಧನಸಹಾಯ ಮಾಡಬೇಕು ಎಂದು ತಿಮ್ಮೇಗೌಡ ಮನವಿ ಮಾಡಿದರು.
ಬಿಡುಗಡೆ: ಕರ್ನಾಟಕ ಜಾನಪದ ಪರಿಷತ್ ಹಾಗೂ ಲೋಕಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರವು ರು.50 ಲಕ್ಷ ಅನುದಾನವನ್ನು ನಿಗದಿಪಡಿಸಿದ್ದು, ರು.25 ಲಕ್ಷವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಸಿಬ್ಬಂದಿ ವೇತನಕ್ಕೆ ವಾರ್ಷಿಕವಾಗಿ ಸುಮಾರು ರು.65 ಲಕ್ಷ ಅಗತ್ಯವಿದ್ದು, ಜಾನಪದ ಲೋಕದ ನಿರ್ವಹಣೆಗೆ ರು.35 ರಿಂದ 40 ಲಕ್ಷ ಕೊರತೆ ಎದುರಾಗಿದೆ. ಹಂತಹಂತವಾಗಿ ಜಾನಪದ ಲೋಕವನ್ನು ಸ್ವಾವಲಂಬನೆಗೊಳಿಸಿ ಪ್ರತಿನಿತ್ಯ ಜಾನಪದ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಪ್ರಸಕ್ತ ವರ್ಷ ಜಾನಪದ ಲೋಕಕ್ಕೆ ಆಗಮಿಸಿದ ಪ್ರವಾಸಿಗರಿಂದ ರು.10.35 ಲಕ್ಷ ವರಮಾನ ಬಂದಿದ್ದು, ಕಳೆದ ವರ್ಷಕ್ಕಿಂತ 1.30 ಲಕ್ಷ ಹೆಚ್ಚಿಗೆಯಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಕ್ಯುರೇಟರ್ ಕುರುವಬಸವರಾಜು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement