ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಲಿ
ಕ.ಪ್ರ.ವಾರ್ತೆ ರಾಮನಗರ ಜ.1
ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸಬ್ಸಿಡಿಗಳು, ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಜಮಾವಣೆ ಆಗಲಿವೆ. ಆದ್ದರಿಂದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದಬೇಕು ಎಂದು ಕಾರ್ಪೊರೇಷನ್ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ನಾರಾಯಣ ಮೂರ್ತಿ ತಿಳಿಸಿದರು.
ನಬಾರ್ಡ್ ಹಾಗೂ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿಯಿಂದ ನಗರದ ಕಾರ್ಪೋರೇಷನ್ ಬ್ಯಾಂಕ್ ಬಳಿ ಆರ್ಥಿಕ ಸಾಕ್ಷರ ಆಂದೋಲನದ ಅಂಗವಾಗಿ ನಡೆದ ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಗೋಡೆ ಬರಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕು. ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಅನಿಲ ವಿತರಕರಿಗೆ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಆಧಾರ್ ಕಾರ್ಡ್ನ ನಕಲು ಪ್ರತಿಯನ್ನು ನೀಡಿದರೆ ಸರ್ಕಾರದ ಸಹಾಯ ಧನದ ನೇರ ಪಾವತಿ ವ್ಯವಸ್ಥೆಗೆ ಅಳವಡಿಸಲಾಗುವುದು ಎಂದು ಹೇಳಿದರು.
ಅತ್ಯವಶ್ಯಕ: ಹಣಕಾಸು ವ್ಯವಹಾರದಲ್ಲಿ ಶಿಸ್ತು ಕಾಯ್ದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾರದರ್ಶಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿವೆ. ಹೀಗಾಗಿ ಬ್ಯಾಂಕ್ ಖಾತೆ ಹೊಂದಿಲ್ಲದ ಗ್ರಾಮೀಣ ಪ್ರದೇಶದ ಫಲಾನುಭವಿಗಳು ಖಾತೆ ಹೊಂದುವುದು ಅತ್ಯವಶ್ಯಕ ಎಂದರು.
ಆರ್ಥಿಕ ಸೇವೆಗಳಲ್ಲಿ ಐದು ನಿಯಮಗಳಿವೆ. ಸಾಲ, ವಿಮೆ, ಹಣ ವರ್ಗಾವಣೆ, ಆರ್ಥಿಕ ಸಮಾಲೋಚನೆ ಹಾಗೂ ಉಳಿತಾಯ ಮನೋಭಾವ ಬೆಳೆಸಲು ಸಾಧ್ಯವಾಗಿದೆ. ಸಾರ್ವಜನಿಕರು ಮೋಸ ಮಾಡುವ ಕಂಪನಿಗಳಿಗೆ ಮಾರುಹೋಗದೆ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ತೆರೆಯಬೇಕೆಂದು ಸಲಹೆ ನೀಡಿದರು.
ನಬಾರ್ಡ್ ಪ್ರವರ್ಧಮಾನಕ್ಕೆ ತಂದಿರುವ ಜಂಟಿ ಬಾಧ್ಯತಾ ಗುಂಪುಗಳ ರಚನೆ, ರೈತ ಕೂಟಗಳ ಉದ್ದೇಶ ಗ್ರಾಮೀಣ ಜನರ ಬಡತನವನ್ನು ಹೋಗಲಾಡಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಈ ಯೋಜನೆಯಿಂದ ಸಮರ್ಪಕ ಸಾಲ ಯೋಜನೆಯು ದೊರೆಯುತ್ತದೆ ಎಂದು ನಾರಾಯಣ ಮೂರ್ತಿ ತಿಳಿಸಿದರು.
ತಿಳಿವಳಿಕೆ ಪಡೆಯಲಿ: ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಕಲಾ ಪ್ರಕಾರವು ಉತ್ತಮ ಸಾಧನವಾಗಿದ್ದು, ಶೇ.50ಕ್ಕೂ ಹೆಚ್ಚು ಜನತೆ ಬ್ಯಾಂಕಿನ ವ್ಯವಹಾರ ಜ್ಞಾನವನ್ನು ತಿಳಿಯದಿರುವುದು ವಿಷಾದನೀಯ. ಜಾಗತೀಕರಣದ ಪ್ರಭಾವದಿಂದಾಗಿ ವಿಶ್ವದ ಗಮನ ಸೆಳೆದಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಜನತೆ ಬದಲಾಗುತ್ತಿರುವ ಸಂದರ್ಭಗಳಲ್ಲಿ ಆರ್ಥಿಕ ಸೇವೆಗಳ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆಯಬೇಕು ಎಂದು ಪರಿಸರ ಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.
ರಾಜ್ಯದ 8 ಜಿಲ್ಲೆಗಳಲ್ಲಿ 2010ರಿಂದ ಆರ್ಥಿಕ ಸಾಕ್ಷರ ಚಳವಳಿಯನ್ನು ಪ್ರಾರಂಭಿಸಿದ್ದು, 192 ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಜನರ ಪರಿವರ್ತನೆಗೆ ಸಹಕಾರಿಯಾಗಲು ಈ ಕಾರ್ಯಕ್ರಮವನ್ನು ನಬಾರ್ಡ್ ರೂಪಿಸಿದೆ ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೇಶ್ ಹೇಳಿದರು.
ಆರ್ಥಿಕ ಸಾಕ್ಷರತಾ ಅಧಿಕಾರಿ ಸುರೇಶ್ಬಾಬು, ಕಾರ್ಪೋರೇಷನ್ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಕೆಂಚಪ್ಪ, ಸಹಾಯಕ ಶಾಖಾ ವ್ಯವಸ್ಥಾಪಕ ಸತೀಶ್ಕುಮಾರ್ ಮತ್ತಿತರರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಬೀದಿ ನಾಟಕ ಪ್ರದರ್ಶನ, ಸಂವಾದ ನಡೆಯಿತು. ಗೋಡೆ ಬರಹದ ಮೂಲಕ ಆರ್ಥಿಕ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲಾಯಿತು.