ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೇಕೇದಾಟು ಪ್ರದೇಶದಲ್ಲಿ ಅಕ್ರಮ ಟೋಲ್ ಸಂಗ್ರಹ: ಕ್ರಮಕ್ಕೆ ಆಗ್ರಹ

Mainashree
Updated On : 2 Jan 2014, 12:23 pm

ಕನ್ನಡಪ್ರಭ ವಾರ್ತೆ, ಕನಕಪುರ, ಜ.1
ಕನಕಪುರ ತಾಲೂಕಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸಂಗಮ-ಮೇಕೇದಾಟು ಪ್ರದೇಶದಲ್ಲಿ ಅಕ್ರಮವಾದ ಟೋಲ್ ಸಂಗ್ರಹ ಪ್ರಾರಂಭವಾಗಿದೆ.
ಕಳೆದ ವರ್ಷ ಹೈಕೋರ್ಟ್ ತೀರ್ಪಿನಂತೆ ಟೋಲ್ ಸಂಗ್ರಹಕ್ಕೆ ತಡೆಬಿದ್ದಿತ್ತು. ಆದರೆ ಕೆಲವು ದಿನಗಳಿಂದ ಕೆಲವು ಪ್ರಭಾವೀ ಸ್ಥಳೀಯರ ನೆರವಿನೊಂದಿಗೆ ಅಕ್ರಮ ಟೋಲ್ ಸಂಗ್ರಹ ಎಡೆಯಿಲ್ಲದೆ ಸಾಗಿದೆ. ಜನವರಿ 1ನೇ ತಾರೀಖಿನಂದು ಒಂದು ಲಕ್ಷಕ್ಕೂ ಹೆಚ್ಚಿನ ಟೋಲ್ ಸಂಗ್ರಹವಾಗಿದೆಯೆಂದರೆ ಅಕ್ರಮದ ಪರಿಮಾಣವನ್ನು ಊಹಿಸಬಹುದು.
ಕಳೆದ ವಾರ ಉಯ್ಯಂಬಳ್ಳಿ ಪಂಚಾಯತ್ ವತಿಯಿಂದ ಟೋಲ್ ಸಂಗ್ರಹಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ತೆರೆಯುವ ಸಭೆಯಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿದ್ದು ಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ಡಿ.2011 ಮಾಹೆಯಲ್ಲಿ ನೀಡಿದೆ. ತಡೆಯಾಜ್ಞೆ ಇರುವಾಗ ಟೆಂಡರ್ ನೀಡಿ ಟೋಲ್ ಸಂಗ್ರಹಿಸುವುದು ಕಾನೂನು ಬಾಹಿರವಾಗುತ್ತದೆ ಎಂಬ ವಿಚಾರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
 ಆದರೆ ಪಂಚಾಯತಿ ಅಧಿಕಾರಿಗಳು ಕೆಲವು ಪ್ರಭಾವಿಗಳ ನೆರವಿನಿಂದ ಸಂಗಮ-ಮೇಕೇದಾಟುಗಳಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹವನ್ನು ನಡೆಸುತ್ತಿದ್ದಾರೆ. ಯಾವುದೇ ದಾಖಲಾತಿ ನೀಡುತ್ತಿಲ್ಲ, ರಸೀದಿ ಕೇಳಿದವರ ಮೇಲೆ ಹಲ್ಲೆಗಳನ್ನು ನಡೆಸಿದ ಪ್ರಕರಣಗಳೂ ಕೂಡಾ ವರದಿಯಾಗಿವೆ. ಟೋಲ್ ಮೊಬಲಗಿಗೆ ಯಾವುದೇ ಬೆಲೆ ನಿಗದಿಯಿಲ್ಲ, 10ರು., ಬದಲಾಗಿ 20ರು.,  ದ್ವಿಚಕ್ರ ವಾಹನಹಳಿಗೆ, ನಾಲ್ಕುಚಕ್ರ ವಾಹನಗಳಿಗೆ 20ರು.,
ಬದಲಾಗಿ 50ರು. ಬಸ್‌ಗಳಿಗೆ 100ರು.ಗೆ ಬದಲಾಗಿ 300 ರು. ಟೋಲ್ ಶುಲ್ಕವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ. ಗುತ್ತಿಗೆದಾರರು ಯಾರೆಂಬುದೂ ತಿಳಿದಿಲ್ಲ. ಪ್ರವಾಸಿಗಳು ಟೋಲ್ ಸಂಗ್ರಹಮಾಡುವ ಹುಡುಗರ ಬೆದರಿಕೆಗೆ ಹೆದರಿ ಯಾವುದೇ ರಸೀದಿಯಿಲ್ಲದೆ ಬಲವಂತವಾಗಿ ಹಣ ನೀಡಿ ಹೋಗಬೇಕಾಗಿದೆ. ಸಂಬಂಧಪಟ್ಟ ತಾಪಂ ಅಧಿಕಾರಿಗಳು, ಪೊಲೀಸ್‌ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಈ ಅಕ್ರಮದ ವಿರುದ್ಧ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement