13ನೇ ದಿನಕ್ಕೆ ಕಾಲಿಟ್ಟ ಮರಳು ಲಾರಿ ಮುಷ್ಕರ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜ.3
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮರಳು ಲಾರಿ ಮಾಲೀಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷಿಸುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹೋರಾಟ ತೀವ್ರಗೊಳಿಸಬೇಕಾದೀತು ಎಂದು ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಈ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗುವುದು. ಅಲ್ಲದೆ ಕಟ್ಟಡ ಸಾಮಗ್ರಿಗಳ ಸಾಗಾಣಿಕೆ ಕೂಡ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗಿದೆ.
ಮರಳು ಸಾಗಾಣಿಕೆದಾರರನ್ನು ಕಳ್ಳರಂತೆ ನೋಡುತ್ತಿರುವ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮನಸೋ ಇಚ್ಛೆ ದಂಡ ಹಾಕಿ, ಕೇಸು ದಾಖಲಿಸಿ ಶೋಷಣೆಗೊಳಪಡಿಸುತ್ತಿದ್ದಾರೆ. ಬೆಂಗಳೂರಿಗೆ ಮರಳು ಸಾಗಿಸಲು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಅವಕಾಶ ಕೊಡುತ್ತಿಲ್ಲ. ಹೀಗಾಗಿ ಮರಳು ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಹೊಸ ಮರಳು ನೀತಿ ಪರಿಷ್ಕರಿಸಿ ಪರವಾನಗಿ ನೀಡಬೇಕು. ಬೆಂಗಳೂರು ನಗರಕ್ಕೆ ಮರಳು ಸಾಗಿಸಲು ಕೂಡಲೇ ಅನುಮತಿ ನೀಡಬೇಕು. ಸೂಕ್ತ ಮರಳು ನೀತಿ ಜಾರಿಗೆ ಬರುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ದೊಡ್ಡಬಳ್ಳಾಪುರದ ಮರಳು ಲಾರಿ ಸಾಗಾಣಿಕೆ ಲಾರಿಗಳ ಮಾಲೀಕರು ಹೇಳಿದ್ದಾರೆ.