ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಪರ್ಧೆ ಅಗತ್ಯ
ಕ.ಪ್ರ.ವಾರ್ತೆ ರಾಮನಗರ ಜ.2
ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಪರ್ಧೆಗಳು ಪ್ರಾಯೋಗಿಕ ತರಬೇತಿ ಇದ್ದಂತೆ. ಪಾಲ್ಗೊಳ್ಳದಿದ್ದರೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಜಾಣ್ಮೆ ಲಭಿಸುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಲಿಂಗರಾಜು ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ಯುವ ಸಂಸತ್ಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನಾನುಭವ ಪಡೆದುಕೊಳ್ಳಬೇಕು ಎಂದರು.
ಹೆಚ್ಚು ಹೆಚ್ಚಾಗಿ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ವಿದ್ಯಾರ್ಥಿಗಳಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಯುವ ಸಂಸತ್ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಸಂಸತ್ ಸದಸ್ಯ, ಮಂತ್ರಿ, ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ, ಸ್ಪೀಕರ್ ಮೊದಲಾದ ಹುದ್ದೆಗಳನ್ನು ಕೇಳಿ ತಿಳಿಯುವುದಕ್ಕಿಂತ ಸ್ವತಃ ತಾವೇ ಸ್ಪರ್ಧಿಸಿ ಪಡೆಯುವ ಅನುಭವ ಅಪೂರ್ವವಾಗಿರುತ್ತದೆ. ಇದು ವಿದ್ಯಾರ್ಥಿಗಳ ಮುಂದಿನ ರಾಜಕೀಯ ಬದುಕಿಗೆ ಬುನಾದಿ ಎಂದರು.
ಯುವ ಸಂಸತ್ ಸ್ಪರ್ಧಿಗಳು ಗ್ರಾಮೀಣ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿರುವುದು ವಿಷಾದನೀಯ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ, ಶೌಚಾಲಯಗಳಿಲ್ಲ, ರೈತರು ಅನುಭವಿಸುತ್ತಿರುವ ಸಂಕಷ್ಟಗಳು ಹಾಗೂ ಅವುಗಳಿಗೆ ಪರಿಹಾರ ಒದಗಿಸುವ ಬಗ್ಗೆ ಸ್ಪರ್ಧಿಗಳು ಗಮನ ಹರಿಸಬೇಕು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆಯ ಉಪ ಕಾರ್ಯದರ್ಶಿ ಬಿ.ಜಿ.ಶ್ಯಾಮಲ ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ಬಂದಿದ್ದರೂ ಗ್ರಾಮೀಣರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಣಕು ಸಂಸತ್ತಿನಲ್ಲಿ ಮಾತನಾಡದಿರುವುದು ಅಚ್ಚರಿ ತಂದಿದೆ. ಪ್ರಪಂಚದಲ್ಲಿ ಪ್ರತಿ ದಿನ ನಡೆಯುವ ಘಟನಾವಳಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಸಂಸತ್ ಸ್ಪರ್ಧೆಯ ಮುಖೇನ ಯುವಜನರಿಗೆ ರಾಜಕಾರಣದ ಪ್ರಾಯೋಗಿಕ ತಯಾರಿ ನೀಡಿ, ರಾಜಕೀಯ ಪ್ರಜ್ಞೆಯನ್ನು ಬೆಳೆಸಲಾಗುತ್ತಿದೆ. ರಾಜಕೀಯದ ವಿವಿಧ ಮಜಲುಗಳನ್ನು ಕಲಿಯಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕಾರಣಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಬಹುಮಾನ ವಿಜೇತರು: ರಾಮನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಪಶ್ರೀ ಪ್ರಥಮ, ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವನ ದ್ವಿತೀಯ, ರಾಮನಗರದ ಬಿಎಸ್ವಿಪಿ ಕಾಲೇಜಿನ ತೇಜಸ್ವಿನಿ ತೃತೀಯ ಹಾಗೂ ಹನುಮಂತನಗರ ಕಾಲೇಜಿನ ಕಿರಣ್ಕುಮಾರ್ ಹಾಗೂ ಲಕ್ಷ್ಮೀಪುರ ಕಾಲೇಜಿನ ಜೀವನ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಯುವ ಸಂಸತ್ ಕಾರ್ಯಕ್ರಮ ಸಂಯೋಜಕ ಎಂ.ಎನ್.ಪ್ರದೀಪ್, ಸಂಚಾಲಕರಾದ ಕಿರಣ್ ಕುಮಾರ್, ನಾಗೇಶ್, ಕೃಷ್ಣಕುಮಾರ್, ಗಣೇಶ್, ಪ್ರದೀಪ್ ಉಪನ್ಯಾಸಕರಾದ ವೆಂಕಟರಾಮು, ಜಿ.ಶಿವಣ್ಣ, ರವಿಕುಮಾರ್ ಭಾಗವಹಿಸಿದ್ದರು.