ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಫಿಲ್ಟರ್ ಮರಳು ದಂಧೆ ಅವ್ಯಾಹತ

Mainashree
Updated On : 2 Jan 2014, 11:11 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಅಕ್ರಮ ಫಿಲ್ಟರ್ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಯಾವುದೇ ಅಧಿಕಾರಿಗಳ ಭಯವೂ ಇಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆ ಜನರ ಕಣ್ಣಿಗೆ ಬಿದ್ದರೂ ಸಂಬಂಧಪಟ್ಟ ಇಲಾಖೆಗಳ ಕಣ್ಣಿಗೆ ಮಾತ್ರ ಬೀಳುವುದು ಅಪರೂಪ ಎನಿಸಿದೆ.
ಬಹುಮುಖ್ಯವಾಗಿ ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಿದೆ. ಅದರಲ್ಲೂ ಸ್ವಾಭಿವಿಕ ಮರಳನ್ನೇ ತೆಗೆದು ಮಾರುವಂತಿಲ್ಲ ಎಂದ ಮೇಲೆ ಕೃತಕ ಮರಳು ಉತ್ಪಾದಿಸಿ ಮಾರಾಟ ಮಾಡುವುದು ಬಹುದೊಡ್ಡ ಅಕ್ರಮ ಎಂದೇ ಪರಿಗಣಿಸಬೇಕಾಗುತ್ತದೆ. ಆದಾಗ್ಯೂ ತಾಲೂಕಿನ ತೂಬಗೆರೆ ಹೋಬಳಿ ಅಕ್ಷರಶಃ ಅಕ್ರಮ ಮರಳು ಅಡ್ಡೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಹಲವು ಬಾರಿ ಇಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮರಳು ದಂಧೆಕೋರರ ಮೇಲೆ ಕೇಸು ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಆ ಕೇಸುಗಳು ಏನಾದವು ಅಲ್ಲಿ ನಡೆಯುತ್ತಿರುವ ದಂಧೆ ನಿಂತಿದೆಯೇ-ನಡೆಯುತ್ತಿದೆಯೇ ಎಂಬ ಮಾಹಿತಿ ಅಧಿಕಾರಿಗಳ ವಲಯದಲ್ಲಿ ಸಿಗುವುದಿಲ್ಲ.
ಫಿಲ್ಟರ್ ಮರಳು ದಂಧೆ: ಸ್ವಾಭಾವಿಕವಾದ ಮಣ್ಣನ್ನು ಹಂತ ಹಂತವಾಗಿ ಶೋಧಿಸಿ ನೀರಿನಿಂದ ತೊಳೆದು ಕೃತಕವಾಗಿ ಮರಳನ್ನು ಉತ್ಪಾದಿಸುವ ಪ್ರಕ್ರಿಯೆ ಫಿಲ್ಟರ್ ಮರಳು ಉತ್ಪಾದನೆ ಎನಿಸುತ್ತದೆ. ಇಂತಹ ಮರಳು ಉತ್ಪಾದಕ ಘಟಕಗಳು ಹತ್ತಾರು ಗ್ರಾಮಗಳಲ್ಲಿ ಆವರಿಸಿಕೊಂಡಿವೆ. ರೈತರು ಕೃಷಿ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದು ಅಪಾಯಕಾರಿಯಾಗಿದೆ. ಫಲವತ್ತಾದ ಮಣ್ಣನ್ನು ಹಂತ ಹಂತವಾಗಿ ಶೋಧಿಸಿ ಉತ್ಪಾದಿಸುವ ಮರಳು ವೈಜ್ಞಾನಿಕವಾಗಿ ಸ್ವಾಭಾವಿಕ ಮರಳಿನಷ್ಟು ಗುಣಮಟ್ಟ ಹೊಂದಿರುವುದಿಲ್ಲ. ಆದರೆ ಸರ್ಕಾರ ನದಿ, ಕೆರೆ ಅಂಗಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿರುವುದು ಈ ದಂಧೆ ಯಥೇಚ್ಛವಾಗಿ ಬೆಳೆಯಲು ಕಾರಣವಾಗಿದೆ.
ಹೊಲಗಳೇ ದಂಧೆ ಕೇಂದ್ರಗಳು: ರೈತರು ಬೆಳೆ ಬೆಳೆಯುತ್ತಿದ್ದ ಹೊಲಗಳು ಈಗ ಫಿಲ್ಟರ್ ಮರಳು ದಂಧೆ ಕೇಂದ್ರಗಳಾಗಿವೆ. ಒಂದು ಸಣ್ಣ ಮೋಟಾರ್ ಅಳವಡಿಸಿಕೊಂಡು ನೀರು ಹಾಯಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡರಾಯಿತು, ಜೊತೆಗೆ 2 ಹೊಂಡಗಳನ್ನು ನಿರ್ಮಿಸಿಕೊಂಡರೆ ತೀರಾ ಕಡಿಮೆ ವೆಚ್ಚದಲ್ಲಿ ಮರಳು ಫಿಲ್ಟರ್ ನಡೆಸಬಹುದು. ಈಗ ಮರಳಿಗೆ ಬಂಗಾರದ ಬೆಲೆ ಸಿಗುತ್ತಿರುವುದು ಕೂಡ ದಂಧೆ ಹೆಚ್ಚಲು ಕಾರಣವಾಗಿದೆ. ಕೆಲವರು ರೈತರಿಂದ ಭೂಮಿಯನ್ನು ಬಾಡಿಗೆಗೆ ಪಡೆದು ಫಿಲ್ಟರಿಂಗ್ ನಡೆಸುತ್ತಿದ್ದಾರೆ.
ಇತ್ತ ಗಮನ ಹರಿಸಿ: ಮರಳು ದಂಧೆ ಈಗ ಲಕ್ಷಾಂತರ ರು.ಲಾಭ ತಂದುಕೊಡುವ ವ್ಯವಹಾರವಾಗಿದೆ. ಇದು ಕಾನೂನು ಬಾಹಿರ ಕೆಲಸವೂ ಹೌದು. ಕೆಲವರಂತೂ ತಮ್ಮದೇ ಟ್ರಾಕ್ಟರುಗಳಲ್ಲಿ ಮರಳು ಮಾರಾಟವನ್ನೂ ನಡೆಸುತ್ತಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೂ ನಷ್ಟ. ಕೃಷಿ ಭೂಮಿಯಲ್ಲಿ ನಡೆಯುವ ಈ ವಾಣಿಜ್ಯ ಚಟುವಟಿಕೆಗೆ ಸರ್ಕಾರದಿಂದ ಯಾರೂ ಪರವಾನಗಿ ಪಡೆದಿರುವುದಿಲ್ಲ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಇತ್ತ ಗಮನ ಹರಿಸಬೇಕಿದೆ.

 ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement