ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಮೂಲ್ ಸಂಸ್ಥೆ ವಾಹನಗಳ ದುರ್ಬಳಕೆ

Mainashree
Updated On : 2 Jan 2014, 11:10 am

ಕ.ಪ್ರ.ವಾರ್ತೆ  ರಾಮನಗರ   ಜ.2
ಕೆಎಂಎಫ್ ಅಧೀನದ ಬಮೂಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದೊಂದು ತಿಂಗಳಿಂದ ಒಕ್ಕಲಿಗರ ಸಂಘದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ಕಾರ್ಯದಲ್ಲಿ ಬಮೂಲ್ ಸಂಸ್ಥೆಗೆ ಸೇರಿದ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ಬೆಳಕಿಗೆ ಬಂದಿದೆ.
ಬಮೂಲ್ ಅಧ್ಯಕ್ಷ ಉಲ್ಲೂರು ಮಂಜುನಾಥ್, ನಿರ್ದೇಶಕರಾದ ಹನುಮಂತೇಗೌಡ, ದಿಬ್ಬೂರು ಜಯಣ್ಣ,  ನಿರ್ದೇಶಕ ನರಸಿಂಹಮೂರ್ತಿ ಸಹೋದರ ಕೃಷ್ಣಮೂರ್ತಿ ಚುನಾವಣಾ ಕಣದಲ್ಲಿದ್ದಾರೆ. ಅವರ ಪರ ಪ್ರಚಾರಕ್ಕಿಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಬೆನ್ನು ತೋರಿದ್ದಾರೆ.  ಸ್ವಯಂ ಪ್ರೇರಣೆಯೋ ಅಥವಾ ಒತ್ತಡವೋ ಕಾರಣ ಏನೇ ಆಗಿದ್ದರೂ ಬಹುತೇಕ ಅಧಿಕಾರಿಗಳು, ಸಿಬ್ಬಂದಿ ತಮ್ಮ ಆಡಳಿತ ಮಂಡಳಿ ಪ್ರತಿನಿಧಿಗಳ ಪರವಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪ್ರಚಾರನಿತರಾಗಿದ್ದಾರೆ. ವೆಚ್ಚದ ಹೊರೆಯೂ ಬಮೂಲ್ ಮೇಲೆ ಬಿದ್ದಿದೆ.
ಕಾರ್ಯದರ್ಶಿಗಳ ಅಲೆದಾಟ: ಬಮೂಲ್ ಪ್ರತಿ ತಾಲೂಕಿನಲ್ಲೂ ಘಟಕ ಹೊಂದಿದೆ. ಘಟಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲಿರುತ್ತಾರೆ. ಇವರು ತಮ್ಮ ಅಧಿಕಾರ ಚಲಾಯಿಸಿ ಗ್ರಾಮೀಣ ಭಾಗದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನೂ ಪ್ರಚಾರದಲ್ಲಿ ತೊಡಗುವಂತೆ ಮಾಡಿದ್ದಾರೆ.
ಚುನಾವಣಾ ಕಣದಲ್ಲಿರುವ ಬಮೂಲ್ ಆಡಳಿತ ಮಂಡಳಿ ಪ್ರತಿನಿಧಿಗಳ ಕರಪತ್ರ, ವಿಸಿಟಿಂಗ್ ಕಾರ್ಡ್, ಕ್ಯಾಲೆಂಡರ್ ಹಿಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮೂರಿನ ವ್ಯಾಪ್ತಿಯಲ್ಲಿ ಮನೆ ಮನೆಗೆ ಅಲೆದು ಮತಯಾಚನೆಯಲ್ಲಿ ತೊಡಗಿದ್ದಾರೆ.
ಬಮೂಲ್ ಉನ್ನತ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಚುನಾವಣಾ ಪ್ರಚಾರ ವೈಖರಿಯನ್ನು ಪರಿಶೀಲನೆ ನಡೆಸುತ್ತಾರೆ. ಸಂಸ್ಥೆಗೆ ಸೇರಿದ ಅವರ ವಾಹನಗಳಲ್ಲಿ ಪ್ರಚಾರ ಸಾಮಗ್ರಿಗಳೇ ತುಂಬಿ ತುಳುಕುತ್ತಿವೆ.
ಸಿಂಡಿಕೇಟ್ ಚಿಂತೆ ಇಲ್ಲ: ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಬಮೂಲ್ ಪ್ರತಿನಿಧಿಗಳು ಇಲ್ಲವೇ ಅವರ ಖಾಸಾ ಸಂಬಂಧಿ ಅಭ್ಯರ್ಥಿಗಳ ಪರವಾಗಿಯಷ್ಟೇ ಪ್ರಚಾರ ನಡೆಸಬೇಕಿದೆ.್ರ್ಮೂಲ್ ಸಿಂಡಿಕೇಟ್ ಹೊರತಾದ ಬೇರೆ ತಂಡ ಇಲ್ಲವೇ ಅಭ್ಯರ್ಥಿ ಪರ ಅಪ್ಪಿತಪ್ಪಿಯೂ ಮತಯಾಚನೆ ನಡೆಸುವಂತಿಲ್ಲ.
ಬಮೂಲ್ ಆಡಳಿತ ಮಂಡಳಿ ಪ್ರತಿನಿಧಿಗಳ ಟಾರ್ಗೆಟ್ ತಮ್ಮ ವೈಯಕ್ತಿಕ ಗೆಲವಷ್ಟೇ ಆಗಿದೆ. ಸಿಂಡಿಕೇಟ್ ಗೆಲ್ಲಿಸಿಕೊಳ್ಳುವ ಚಿಂತೆ ಅವರಲ್ಲಿಲ್ಲ. ಒಂದೊಮ್ಮೆ ಇದ್ದಿದ್ದರೆ ತಮ್ಮದೇ ತಂಡದ ಇತರೆ ಅಭ್ಯರ್ಥಿಗಳ ಪರವಾಗಿಯೂ ಮತಯಾಚನೆ ಮಾಡಿಸದೆ ಇರುತ್ತಿರಲಿಲ್ಲ.
ವೈದ್ಯ ಸೇವೆಯೂ ಅಲಭ್ಯ: ಸಂಚಾರಿ ಘಟಕಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಪಶು ವೈದ್ಯಕೀಯ ಸಹಾಯಕರ ತಂಡವಿದೆ. ಹೈನೋದ್ಯಮ ಅವಲಂಬಿತ ಸಹಕಾರಿಗಳ ಜಾನುವಾರುಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಈ ತಂಡದ ಉದ್ದೇಶ. ಚುನಾವಣಾ ಪ್ರಚಾರದ ಬಿರುಸಿನಲ್ಲಿ ಈ ತಂಡವೂ ಕರ್ತವ್ಯ ಮರೆತಿದೆ.
ತಮ್ಮ ಜಾನುವಾರುವಿಗೆ ತುರ್ತು ಚಿಕಿತ್ಸೆ ಕೊಡಿಸಲು ಹೈನೋದ್ಯಮ ಅವಲಂಬಿತರು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಹಣ ಪಾವತಿಸಿ, ಕೂಪನ್ ಪಡೆದು ದಿನಗಟ್ಟಲೆ ಕಾಯುವ ಸ್ಥಿತಿ ಎದುರಾಗಿದೆ. ಕೆಲವೆಡೆ ಸೇವೆ ವಿಳಂಬದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದ್ದೂ ಉಂಟು.
ದೂರು ಕೇಳುವವರು ಯಾರು: ಬಮೂಲ್ ಸಹಕಾರಿ ವ್ಯವಸ್ಥೆಯಲ್ಲಿರುವ ಯಜಮಾನಿಕೆ ಸಂಸ್ಕೃತಿಯ ಸಂಸ್ಥೆ. ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ತಾಲೂಕು, ಜಿಲ್ಲಾಡಳಿತ, ಸರ್ಕಾರದ ಲಂಗು-ಲಗಾಮಿಲ್ಲ. ದುರ್ಬಳಕೆಯ ಅನುಕೂಲ ಆಗುತ್ತಿರುವುದೇ ಸಂಸ್ಥೆಯ ಮುಖ್ಯಸ್ಥರಿಗೆ. ಹೀಗಾಗಿ ದೂರು ನೀಡುವುದು ಯಾರಿಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಬಮೂಲ್ ಆಡಳಿತ ಯಂತ್ರ, ವಾಹನಗಳ ದುರ್ಬಳಕೆ ಇದೇ ಮೊದಲಲ್ಲ. ಈ ಸಂಸ್ಥೆಯ ಪ್ರತಿನಿಧಿಗಳು ಎದುರಿಸುವ ಇತರೆ ಚುನಾವಣೆಗಳಲ್ಲೂ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕರ್ತರಂತೆ ದುಡಿಯುತ್ತಲೇ ಬಂದಿದ್ದಾರೆ. ಸೊಲ್ಲೆತ್ತಿದರೆ ವರ್ಗ, ಅಮಾನತಿನ ಶಿಕ್ಷೆ ತಪ್ಪಿದ್ದಲ್ಲ. ಹೀಗಾಗಿ ಜೀ ಹುಜೂರ್ ಎನ್ನದೆ ವಿಧಿಯಿಲ್ಲ.
ಸಂಸ್ಥೆಗೆ ಕಳಂಕ ತಂದಿದ್ದಾರೆ
ಬಮೂಲ್ ಎಲ್ಲ ಜಾತಿ ಮತ್ತು ವರ್ಗದ ಹೈನೋದ್ಯಮ ಅವಲಂಬಿತರ ಹಿತ ಕಾಯಬೇಕಾದ ಸಂಸ್ಥೆ. ಇದರ ಅಧಿಕಾರಿಗಳು ಮತ್ತು ಸಿಬ್ಬಂದಿಯು ವಾಹನಗಳನ್ನು ದುರ್ಬಳಕೆ ಮಾಡಿಕೊಂಡು, ಒಕ್ಕಲಿಗರ ಸಂಘದ ಚುನಾವಣಾ ಪ್ರಚಾರದಲ್ಲಿ ತೊಡಗಿ ಜಾತಿ ವಿಷಬೀಜ ಬಿತ್ತಿ, ಸಂಸ್ಥೆಗೆ ಕಳಂಕ ತಂದಿದ್ದಾರೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ.
- ಲಕ್ಷ್ಮಣಸ್ವಾಮಿ,
ಜಿಲ್ಲಾಧ್ಯಕ್ಷ, ರೈತ ಸಂಘ, ರಾಮನಗರ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement