ಸುದ್ದಿ ಸಂಕ್ಷೇಪ
ಸಾವಿತ್ರಿಬಾಯಿ ಪುಲೆ ಜಯಂತ್ಯುತ್ಸವ
ದೊಡ್ಡಬಳ್ಳಾಪುರ: ಬೆಂ.ಗ್ರಾ.ಜಿಲ್ಲಾ ಪ್ರಜಾ ವಿಮೋಚನಾ ಚಳವಳಿ-ಸಮತಾವಾದ ನೇತೃತ್ವದಲ್ಲಿ ಮಾತೆ ಸಾವಿತ್ರಿ ಬಾಯಿ ಪುಲೆ ಅವರ 184ನೇ ಜನ್ಮದಿನಾಚರಣೆ ಕಾರ್ಯಕ್ರಮ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಜ.3ರ ಶುಕ್ರವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ.
ಗೀತಾ ಜಯಂತಿ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಶಂಕರಾನಂದ ಪಾರ್ಥಸಾರಥಿ ಗೀತಾ ಮಂದಿರ ನೇತೃತ್ವದಲ್ಲಿ 24ನೇ ವರ್ಷದ ಶ್ರೀಗೀತಾ ಜಯಂತಿ ಕಾರ್ಯಕ್ರಮ ಜ.3ರ ಶುಕ್ರವಾರದಿಂದ ಜ.5ರ ಭಾನುವಾರದವರೆಗೆ ಶ್ರೀಸದ್ಗುರು ಗಗನಾರ್ಯರ ಸೇವಾ ಟ್ರಸ್ಟ್ನ ಮಠದಲ್ಲಿ ನಡೆಯಲಿದೆ. ಕಾರ್ಯಕ್ರಮಗಳು ಶ್ರೀಜ್ಞಾನಾನಂದಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಗೀತಾಪಾರಾಯಣ, ಅಷ್ಟೋತ್ತರ ಪೂಜೆ, ಗೀತಾ ಪ್ರವಚನ ಸೇರಿದಂತೆ ಹಲವು ಕಾರ್ಯಕ್ರಮಗಳಿರುತ್ತವೆ. ಶ್ರೀಆನಂದಭಾರತಿ ಸ್ವಾಮೀಜಿ, ಶ್ರೀಜ್ಞಾನಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ವಸತಿಗೃಹದ ಕೊಠಡಿಯಲ್ಲಿ ವ್ಯಕ್ತಿ ಸಾವು
ರಾಮನಗರ: ವಸತಿಗೃಹದ ಕೊಠಡಿಯಲ್ಲಿ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮೃತನನ್ನು ಬೆಂಗಳೂರಿನ ಉತ್ತರಹಳ್ಳಿಯ ಸುರೇಶ್ (45) ಎಂದು ಗುರುತಿಸಲಾಗಿದೆ. ಡಿ.31ರಂದು ಆತ ಲಾಡ್ಜ್ನಲ್ಲಿ ಕೊಠಡಿ ಪಡೆದು, ವಾಸ್ತವ್ಯ ಮಾಡಿದ್ದನು.
ಬುಧವಾರ ಇಡೀ ದಿನ ಆತ ಕೊಠಡಿ ಬಾಗಿಲು ತೆರೆದೇ ಇರಲಿಲ್ಲ. ಹೊಸ ವರ್ಷಾಚರಣೆ ಪ್ರಯುಕ್ತ ಹಿಂದಿನ ರಾತ್ರಿ ಮದ್ಯ ಸೇವಿಸಿ, ನಿದ್ರಿಸುತ್ತಿರಬಹುದು ಎಂದು ಲಾಡ್ಜ್ ಸಿಬ್ಬಂದಿ ಭಾವಿಸಿದ್ದರು.
ಗುರುವಾರ ಬೆಳಗ್ಗೆ ಅನುಮಾನದಿಂದ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದಾದ ಸುರೇಶ್ ಸಾವನ್ನಪ್ಪಿರುವುದು ತಿಳಿಯಿತು.
ಮೃತನ ಜೇಬಿನಲ್ಲಿದ್ದ ಗುರುತಿನ ಚೀಟಿಯೊಂದರ ಸಹಾಯದಿಂದ ಆತನ ಗುರುತು ಪತ್ತೆಯಾಯಿತು. ಕುಟುಂಬದವರಿಗೆ ಮಾಹಿತಿ ನೀಡಿ, ಶವ ಪರೀಕ್ಷೆ ಬಳಿಕ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.
ಆತ ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಬೆಳಗ್ಗೆಯೇ ಅಸು ನೀಗಿರಬಹುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ನಗರದ ಐಜೂರು ಠಾಣೆ ಪೊಲೀಸರು ತಿಳಿಸಿದ್ದಾರೆ.