ಹನುಮಂತಪುರ ಕೆರೆಯಲ್ಲಿ ಐದು ಕಾಡಾನೆಗಳು ಬೀಡು
ನೆಲಮಂಗಲ: ತಾಲೂಕಿನ ಹನುಮಂತಪುರ ಕೆರೆಯಲ್ಲಿ 5 ಕಾಡಾನೆಗಳು ಬೀಡು ಬಿಟ್ಟು ಗ್ರಾಮದ ಸುತ್ತಮುತ್ತಲಿನ ತೋಟಗಳ ಬೆಳೆಯನ್ನು ಹಾನಿ ಮಾಡಿರುವ ಘಟನೆ ಗುರುವಾರ ನಡೆದಿದೆ.
ಕಳೆದ 2 ತಿಂಗಳಿಂದಲೂ ಕಾಡಾನೆ, ಚಿರತೆ, ಕರಡಿಗಳ ಕಾಟದಿಂದ ತಾಲೂಕಿನ ಸೋಂಪುರ ಹೋಬಳಿಯ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಯನ್ನು ತಿಂದು ಹಾಳು ಮಾಡಿದ್ದಲ್ಲದೆ ಆಸ್ತಿ ಪಾಸ್ತಿಯೂ ನಾಶವಾಗಿದೆ.
ಅಕ್ಟೋಬರ್ ತಿಂಗಳ ಕೊನೆಯ ವಾರ ಶಿವಗಂಗೆ ಮೂಲಕ 9 ಕಾಡಾನೆಗಳು ತಾಲೂಕನ್ನು ಪ್ರವೇಶಿಸಿ ದೇವರ ಹೊಸಹಳ್ಳಿ, ಕಾಮಲಾಪುರ, ಸೀಗೇಪಾಳ್ಯ, ನಾರಾಯಣಪುರ, ವೀರಸಾಗರ, ಗೊಲ್ಲರಹಟ್ಟಿ, ಕೆಂಗಲ್, ಬೀರಗೊಂಡನಹಳ್ಳಿ ಸೇರಿದಂತೆ ಇನ್ನು ಹತ್ತಾರು ಹಳ್ಳಿಗಳ ವ್ಯಾಪ್ತಿಯಲ್ಲಿ ರೈತರ ಬೆಳೆಯನ್ನು ತಿಂದು ಹಾಳು ಮಾಡಿವೆ. ನೆರೆಯ ತುಮಕೂರು ತಾಲೂಕಿಗೆ 3 ವಾರಗಳ ಕಾಲ ತೆರಳಿದ ಕಾಡಾನೆಗಳು ಮತ್ತು ಎರಡು ವಾರದಿಂದಲೂ ಶಿವಗಂಗೆಯ ಬೆಟ್ಟದ ಆಸು ಪಾಸಿನ ಗ್ರಾಮಗಳಿಗೆ ಎರಡು ಗುಂಪಾಗಿ ದಾಳಿ ಮಾಡುತ್ತಲೆ ಬಂದಿದ್ದು ಬುಧವಾರ ರಾತ್ರಿ ಹೆದ್ದಾರಿ 4ರ ಪಕ್ಕದ ಹನುಮಂತಪುರದ ಕೆರೆಯಲ್ಲಿ ಆಶ್ರಯ ಪಡೆದಿವೆ. ರೈತರು ತಮ್ಮ ಲಕ್ಷಾಂತರ ಮೌಲ್ಯದ ಬೆಳೆಯನ್ನು ಕಾಡಾನೆಗಳು ತಿಂದು ನಷ್ಟ ಮಾಡಿದ್ದರೂ ತಮ್ಮ ಬೆಳೆ ನಷ್ಟದ ಬಗ್ಗೆ ಅರಣ್ಯ ಇಲಾಖೆಗೆ ಹೆಚ್ಚಿನವರು ದೂರು ನೀಡಿಲ್ಲ.
ಹೆದ್ದಾರಿಯಲ್ಲಿ ಹೋಗುವವರು ವಾಹನ ನಿಲ್ಲಿಸಿ ಆನೆಗಳನ್ನು ನೋಡುತ್ತಾ ತೆರಳುತ್ತಿದ್ದ ದೃಶ್ಯ ಮುಂಜಾನೆಯಿಂದ ಸಂಜೆವರೆಗೂ ನಡೆಯುತ್ತಲೆ ಇತ್ತು.