ಗಾಂಜಾ ಮಾರಾಟ: ಅಧಿಕಾರಿಗಳಿಬ್ಬರ ಪುತ್ರರೂ ಸೇರಿದಂತೆ ಐವರ ಬಂಧನ
ಬೆಂಗಳೂರು: ಗಾಂಜಾ ಮಾರಾಟ ಆರೋಪದ ಮೇಲೆ ಗುಜರಾತ್ನ ರೇಲ್ವೆ ಭದ್ರತಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ಪುತ್ರ ಸೇರಿದಂತೆ ಐವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಮಗ ಮುಖೇಶ್ (23), ನೆಲಮಂಗಲ ಸರ್ಕಾರಿ ಆಸ್ಪತ್ರೆ ನೇತ್ರ ತಜ್ಞರ ಪುತ್ರ ವರುಣ್ (23), ಕಮ್ಮಗೊಂಡನಹಳ್ಳಿ ನಿವಾಸಿ ಪ್ರಭು (23), ಆರ್.ಟಿ ನಗರದ ಮಹಮ್ಮದ್ ಉಮೇಜ್ (23), ಯಶವಂತಪುರದ ಸತೀಶ್ (24) ಬಂಧಿತರು. ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳು ತಲೆಮರಿಸಿಕೊಂಡಿದ್ದಾರೆ.
ಬಂಧಿತರಿಂದ ರು. 7 ಲಕ್ಷ ಬೆಲೆಯ 4 ಕೆಜಿ 700 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ವರುಣ್ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ಆರ್ಪಿಎಫ್ ಇನ್ಸ್ಪೆಕ್ಟರ್ ಪುತ್ರ ಮುಖೇಶ್, ಪುಣೆಯಲ್ಲಿ ನೆಲೆಸಿದ್ದು ತನ್ನ ಸಹಚರರ ಮೂಲಕ ವರುಣ್ಗೆ ಗಾಂಜಾ ಸರಬರಾಜು ಮಾಡುತ್ತಿದ್ದ.
ಯಶವಂತಪುರದ ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ವರುಣ್ ಸ್ನೇಹಿತರೊಂದಿಗೆ ಸೇರಿ ಗಾಂಜಾ ಪೊಟ್ಟಣಗಳನ್ನು ತಯಾರಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರು. 200ಕ್ಕೆ ಗಾಂಜಾ ಪೊಟ್ಟಣ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.