ಘಾಟಿ ಸುತ್ತಮುತ್ತ ನಿಲ್ಲದ ಮರಳು ಮಾಫಿಯಾ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜ.3
ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಫಿಲ್ಟರ್ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೆನ್ನು ಹತ್ತಿರುವ ತಾಲೂಕು ಆಡಳಿತ ಫಾಲ್‌ಫಾಲ್ ದಿನ್ನೆ ಸಮೀಪ ಸುಮಾರು 200 ಲೋಡ್ ಮರಳನ್ನು ವಶಪಡಿಸಿಕೊಂಡಿದೆ.
ತಹಶೀಲ್ದಾರ್ ಕೆ.ಬಿ. ಸಿದ್ಧಲಿಂಗಯ್ಯ ನೇತೃತ್ವದಲ್ಲಿ ದಾಳಿ ಸಂಘಟಿಸಿದ ಅಧಿಕಾರಿಗಳು ಮತ್ತು ಪೊಲೀಸರು ಹತ್ತಾರು ಎಕರೆ ಭೂಮಿಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಮರಳು ಗಣಿಗಾರಿಕೆ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಲಾರಿ ಮಾಲೀಕರ ಸಂಘದ ಕೆಲ ಪದಾಧಿಕಾರಿಗಳು ಕೊಟ್ಟ ದೂರಿನನ್ವಯ ದಾಳಿ ನಡೆಸಿರುವ ಅಧಿಕಾರಿಗಳಿಗೆ ಗುಡ್ಡ-ಬೆಟ್ಟ-ನೆಲವನ್ನು ಮನಸೋಇಚ್ಛೆ ಅಗೆದು ಮರಳು ಲೂಟಿ ಮಾಡಿರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಹತ್ತಾರು ಮರಳು ಫಿಲ್ಟರ್ ಕೇಂದ್ರಗಳಿವೆ. ಅಪಾರ ಪ್ರಮಾಣದಲ್ಲಿ ನೀರು, ವಿದ್ಯುತ್ ಬಳಕೆ ನಡೆಯುತ್ತಿದೆ. ವಶಪಡಿಸಿಕೊಂಡಿರುವ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಕ್ಕೆ ನೀಡಲಾಗಿದೆ ಎನ್ನಲಾಗಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಅಶ್ವತ್ಥನಾರಾಯಣ ಮತ್ತಿತರರು ಮರಳು ಮಾಫಿಯಾ ತಾಲೂಕಿನಲ್ಲಿ ಗಂಭೀರವಾಗಿ ಬೆಳೆಯುತ್ತಿದೆ. ಇದಕ್ಕೆ ಕೆಲ ಇಲಾಖೆಗಳ ಅಧಿಕಾರಿಗಳ ಕುಮ್ಮಕ್ಕು ಕಾರಣ. ಘಾಟಿ ಸುಬ್ರಹ್ಮಣ್ಯ ಸೇರಿದಂತೆ ತೂಬಗೆರೆ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಲಾರಿ ಮಾಲೀಕರು ದೂರದೂರುಗಳಿಂದ ನೈಸರ್ಗಿಕ ಮರಳು ತುಂಬಿಕೊಂಡು ಬಂದರೆ ಮಾರ್ಗಮಧ್ಯೆಯೇ ಅಡ್ಡಗಟ್ಟಿ ಕೇಸು ದಾಖಲಿಸುವ ಪೊಲೀಸರು ನಮ್ಮ ತಾಲೂಕಿನಲ್ಲೇ ಕಣ್ಣೆದುರೇ ನಡೆಯುತ್ತಿರುವ ಫಿಲ್ಟರ್ ಮರಳು ಲೂಟಿ ತಡೆಯಲು ವಿಫಲರಾಗಿದ್ದಾರೆ. ಈ ಫಿಲ್ಟರ್ ಮರಳು ದಂಧೆ ನಿಗ್ರಹಿಸದೆ ನಿರ್ಲಕ್ಷ್ಯ ತೋರಿದ ಪಕ್ಷದಲ್ಲಿ ಗಂಭೀರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.