ಡಿಕೆಶಿಗೆ ಲಕ್, ಎಚ್ಡಿಕೆಗೆ ಕೊಕ್
-ಬಿಜೆಪಿ, ಕೆಜೆಪಿ ವಿಲೀನ ಕಾರಣ ಜೆಡಿಎಸ್ ಕೈ ತಪ್ಪಲಿದೆ ಪ್ರತಿಪಕ್ಷ ಸ್ಥಾನ
-ಜಿಲ್ಲಾ ಉಸ್ತುವಾರಿ ಪಟ್ಟವೂ ಡಿಕೆಶಿಗೆ ಸಿಗುವ ಸಾಧ್ಯತೆ
ರಾಮನಗರ: ರಾಜಕಾರಣವೇ ಉಸಿರು. ಅದೇ ಹಾಸು-ಹೊದಿಕೆ ಎನ್ನುವಂತಿರುವ ರಾಮನಗರ ಜಿಲ್ಲೆ ಪಾಲಿಗೆ ಹೊಸ ವರ್ಷಾರಂಭದಲ್ಲೇ ರಾಜಕೀಯವಾಗಿ ಏಳು-ಬೀಳು ಎದುರಾಗಿದೆ. ಸಚಿವ ಸ್ಥಾನ ವಂಚಿತರಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಲಕ್ ಕುದುರಿದರೆ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊಕ್ ಸನ್ನಿಹಿತವಾಗಿದೆ.
ಮುಯ್ಯಿ ತೀರುಸುವರೇ?: ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ತಮ್ಮ ಅಧಿಕಾರದ ಅವಧಿಯಲ್ಲಿ ಡಿಕೆಶಿ ಸಹೋದರರ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಅದನ್ನೇ ಕಾರಣವಾಗಿಟ್ಟುಕೊಂಡ ಡಿಕೆಶಿ ಪಕ್ಷಾಂತರಕ್ಕೆ ಮುಂದಾಗಿದ್ದ ಯೋಗೇಶ್ವರ್ಗೆ ಕಾಂಗ್ರೆಸ್ ಕದ ಮುಚ್ಚುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದರು. ಆದರೂ ಎಸ್ಪಿ ಟಿಕೆಟ್ನಿಂದ ಯೋಗೇಶ್ವರ್ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಎಸ್ಪಿಯೊಂದಿಗೆ 'ಕೈ' ಜೋಡಿಸಿ ಕಾಂಗ್ರೆಸ್ ವಿಜಯದ ನಗೆ ಬೀರಿತ್ತಾದರೂ ಇಬ್ಬರ ಸಂಬಂಧ ಅಷ್ಟೇನೂ ಸುಧಾರಿಸಿಲ್ಲ. ಯೋಗೇಶ್ವರ್ ಡಿಕೆಶಿ ಸಹೋದರರೊಂದಿಗೆ ಒಂದು ಅಂತರ ಕಾಯ್ದು ಕೊಂಡೇ ಇದ್ದಾರೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಎಸ್ಪಿಯಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿ ಮುಯ್ಯಿ ತೀರಿಸಿಕೊಳ್ಳಲು ವೇದಿಕೆಯನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ಬಾಲುಗೆ ಉಭಯ ಸಂಕಟ: ಮಾಗಡಿಯ ಜೆಡಿಎಸ್ ಶಾಕಸಕ ಎಚ್.ಸಿ.ಬಾಲಕೃಷ್ಣ ಅವರು ಪದೇ ಪದೇ ಡಿಕೆಶಿ ವಿರುದ್ಧ ಹರಿ ಹಾಯುತ್ತಲೇ ಬಂದಿದ್ದರಾದರೂ ಉಭಯತ್ರರ ಸಂಬಂಧ ಹಳಸಿಲ್ಲವೆನ್ನುವುದು ಜಗಜ್ಜಾಹೀರವಾದ ಸಂಗತಿ. ಒಂದೊಮ್ಮೆ ಕುಮಾರಸ್ವಾಮಿ ಮತ್ತು ಶಿವಕುಮಾರ್ ಸಂಘರ್ಷ ಮುಂದುವರಿದರೆ ಬಾಲಕೃಷ್ಣ ಪಾಲಿಗೆ ಉಭಯ ಸಂಕಟದ ಸ್ಥಿತಿಯಂತೂ ಎದುರಾಗಲಿದೆ.
ರಾಜಕೀಯವಾಗಿ ಶಿವಕುಮಾರ್ ಮಹತ್ವಾಕಾಂಕ್ಷಿಯಾಗಿದ್ದು, ವಿರೋಧಿಗಳ ಪಾಲಿಗೆ ಸವಾಲಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸಿರುವ ಕಾರಣಕ್ಕೆ ಶಿವಕುಮಾರ್ಗೆ ತಮ್ಮ ಗತ್ತು, ಗೈರತ್ತು, ಧೋರಣೆಗಳನ್ನು ಬದಿಗಿಟ್ಟೇ ಕೆಲಸ ಮಾಡುವುದು ಅನಿವಾರ್ಯ. ಆದರೆ, ಫಲಿತಾಂಶದ ನಂತರ ಜಿಲ್ಲೆಯಲ್ಲಿ ಅಧಿಪತ್ಯ ಸ್ಥಾಪನೆಗೆ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ.
ವಿಳಂಭವಾದ್ರೂ ಇಂಧನ ಖಾತೆ
ಕನಕಪುರದ ಡಿ.ಕೆ.ಶಿವಕುಮಾರ್ ಅವರಿಗೆ 'ಕಳಂಕಿತ' ಎಂಬ ಕಾರಣವೊಡ್ಡಿ ಮುಚ್ಚಿದ್ದ ಸಂಪುಟದ ಬಾಗಿಲು ಕಡೆಗೂ ತೆರೆದಿದ್ದು, ಆಯಕಟ್ಟಿನ ಇಂಧನ ಖಾತೆಯೇ ಲಭಿಸಿದೆ. ಇಷ್ಟರಲ್ಲೇ ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿಯ ಪಟ್ಟವೂ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಇಲ್ಲವೇ ಕಿಂಗ್ ಮೇಕರ್ ಆಗದೇ ವಂಚಿತರಾದ ಎಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಬಿಜೆಪಿ ಜತೆ ಕೆಜೆಪಿ ವಿಲೀನದೊಂದಿಗೆ ಕುಮಾರಸ್ವಾಮಿ ಹುದ್ದೆಗೆ ಕುತ್ತುಂಟಾಗಲಿದೆ.
ಇಕ್ಕಟ್ಟಿನಲ್ಲಿ ಎಚ್ಡಿಕೆ
ಶಿವಕುಮಾರ್ಗೆ ಸಚಿವ ಸ್ಥಾನ ದಕ್ಕಿದ್ದು ವಿರೋಧಿ ಪಾಳಯಕ್ಕೆ ಅತೃಪ್ತಿಯೊಂದಿಗೆ ದಿಗಿಲೂ ಮೂಡಿಸಿದೆ. ಅದರಲ್ಲೂ ಜೆಡಿಎಸ್ ಪಡಸಾಲೆಗೆ ಮಂಕು ಕವಿದಂತಾಗಿದೆ. ಹೊಸ ರಾಜಕೀಯ ಬೆಳವಣಿಗೆಯನ್ನು ಅರಗಿಸಿಕೊಳ್ಳಲು 'ದಳ'ಪತಿಗಳು ತಿಣುಕಾಡುತ್ತಿದ್ದಾರೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವೆ ನಿರಂತರ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಸಂಸದ ಡಿ.ಕೆ.ಸುರೇಶ್ ಅವರು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾದಾಗ ಕುಮಾರಸ್ವಾಮಿ ವಿರೋಧಿಸಿದ್ದರು. ಈ ವಿಷಯವಾಗಿ ದೊಡ್ಡ ರಂಪಾಟವೇ ನಡೆದು, ಕಡೆಗೆ ಯೋಜನೆ ಸ್ಥಗಿತಗೊಂಡಿತು. ಇಂಥದ್ದೇ ಹಲವಾರು ಘಟನೆಗಳು ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಮತ್ತೆ ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ.
ಮತ್ತೀಕೆರೆ ಜಯರಾಮ್