ದೊಡ್ಡಗಂಗವಾಡಿ ಗ್ರಾಪಂ ಅಧ್ಯಕ್ಷರು ಕ್ಷಮೆ ಯಾಚಿಸಲಿ: ಉಮೇಶ್
ರಾಮನಗರ: ರೋಲ್ ಕಾಲ್ಗಾಗಿ ಮಾಹಿತಿ ಹಕ್ಕು ಅಧಿನಿಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಬಹಿರಂಗ ಕ್ಷಮೆ ಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಾಲೂಕಿನ ದೊಡ್ಡಗಂಗವಾಡಿ ಗ್ರಾಪಂ ನರೇಗಾ ಹಗರಣ ವಿರುದ್ಧದ ಹೋರಾಟಗಾರರು ಎಚ್ಚರಿಸಿದ್ದಾರೆ.
ನರೇಗಾ ಅವ್ಯವಹಾರವನ್ನು ತಾವು ಬಯಲಿಗೆಳೆದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಮಹದೇವಯ್ಯ, ಕಾಂಗ್ರೆಸ್ ಮುಖಂಡ ಡಿ.ಎಂ.ಗೋಪಾಲ್ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ತಮ್ಮ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದಾರೆ ಎಂದು ಮಾಹಿತಿ ಹಕ್ಕು ಅರ್ಜಿದಾರರಾದ ಉಮೇಶ್, ಸುಂದ್ರೇಶ್ ಾಗೂ ಸುರೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನರೇಗಾ ಯೋಜನೆಯಲ್ಲಿ ಕಾಮಗಾರಿಯೇ ನಡೆಯದಿದ್ದರೂ ಹಣ ಮಂಜೂರಾಗಿದೆ ಎನ್ನುವುದುನ್ನು ಸ್ವತಃ ಗ್ರಾಪಂ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾರೆ. ಮಹದೇವಮ್ಮ ಎಂಬುವರು ಕೆಲಸಕ್ಕೆ ಅರ್ಜಿ ಸಲ್ಲಿಸದೇ ಇದ್ದರೂ ಅವರ ಹೆಸರಿನಲ್ಲಿ ಹಣ ಬಿಡುಗಡೆಯಾಗಿದೆ. ಇಷ್ಟಾಗಿಯೂ ಗ್ರಾಪಂ ಅಧ್ಯಕ್ಷ ಮಹದೇವಯ್ಯ, ಗೋಪಾಲ್ ಅಕ್ರಮ ನಡೆದಿಲ್ಲವೆಂದು ವಾದಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಅರ್ಜಿ ಸಲ್ಲಿಸಿದ್ದರೂ ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಯು ಯಾವುದೇ ಮಾಹಿತಿ ಒದಗಿಸಿಲ್ಲ. ಆದರೆ, ಗ್ರಾಪಂ ಅಧ್ಯಕ್ಷರೊಡಗೂಡಿ ಖಾಸಗಿ ವ್ಯಕ್ತಿಗಳು ನಡೆಸಿದ ಸುದ್ದಿಗೋಷ್ಠಿಗೆ ಕಡತ ಸಮೇತ ಹಾಜರಾಗಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಕಚೇರಿ ಬಿಟ್ಟು, ರಾಮನಗರಕ್ಕೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಅವರಿಬ್ಬರ ವಿರುದ್ಧ ಕ್ರಮಕ್ಕಾಗಿ ಜಿಪಂ ಸಿಇಒಗೆ ದೂರು ನೀಡಲಾಗಿದೆ ಎಂದು ಅವರು ಇದೇ ವೇಳೆ ವಿವರಿಸಿದರು.